ಬೆಂಗಳೂರು; ದೇವರಚಿಕ್ಕನಹಳ್ಳಿಯ ಆಶ್ರಿತ್ ಅಪಾರ್ಟ್ಮೆಂಟ್ ಅಗ್ನಿ ಅವಘಡಕ್ಕೆ ಕಾರಣ ನಿಗೂಢವಾಗಿದ್ದು, ತಾಯಿ-ಮಗಳದ್ದು ಅಸಹಜ ಸಾವು ಎಂದು ಬೇಗೂರು ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ತನಿಖೆಯನ್ನು ಕೈಗೊಂಡಿದ್ದಾರೆ. ಅಪಾರ್ಟ್ಮೆಂಟ್ ನ ಪ್ಲ್ಯಾಟ್ ಗಳಿಗೆ ಬೆಂಕಿ ಹೊತ್ತಿಕೊಂಡಿದ್ದು ಹೇಗೆ ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದು ವಿಧಿ ವಿಜ್ಞಾನ ಪ್ರಯೋಗಾಲಯದ (ಎಫ್ ಎಸ್ ಎಲ್) ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.
ಎಲೆಕ್ಟ್ರಿಕಲ್ ಎಂಜಿನಿಯರ್ ತಂಡವು ಬೆಂಕಿಯ ಕಾರಣ ತಿಳಿಯಲು ಪರಿಶೀಲನೆ ನಡೆಸಲಿದೆ. ಮತ್ತೊಂದೆಡೆ ಅಗ್ನಿಶಾಮಕ ಇಲಾಖೆಯ ಅಧಿಕಾರಿಗಳು ಕೂಡ ಬೆಂಕಿ ಅವಘಡದ ಬಗ್ಗೆ ತನಿಖೆ ನಡೆಸಲಿದ್ದಾರೆ. ಅಗ್ನಿ ದುರಂತಕ್ಕೆ ಬಿಬಿಎಂಪಿ, ಅಪಾರ್ಟ್ ಮೆಂಟ್ ಮಾಲೀಕರ ನಿರ್ಲಕ್ಷ್ಯವೇ ಕಾರಣ ಎನ್ನಲಾಗಿದೆ. ಅಪಾರ್ಟ್ ಮೆಂಟ್ನಲ್ಲಿ ಅಗ್ನಿ ಆಕಸ್ಮಿಕ ತಡೆಯುವ ನಿಯಮಗಳ ಪಾಲನೆಯಾಗಿಲ್ಲ. ಹೀಗಾಗಿ ಈ ಇಬ್ಬರ ನಿರ್ಲಕ್ಷ್ಯದಿಂದ ಎರಡು ಜೀವಗಳು ಸಜೀವ ದಹನವಾಗಿವೆ ಎಂದು ಸಾರ್ವಜನಿಕರು ದೂರಿದ್ದಾರೆ.ಅಪಾರ್ಟ್ ಮೆಂಟ್ನಲ್ಲಿ ಜನರನ್ನು ಎಚ್ಚರಿಸುವ ಸೈರನ್ ವ್ಯವಸ್ಥೆ ಇಲ್ಲ. ಬೆಂಕಿ, ಹೊಗೆ ನಂದಿಸಲು ವಾಟರ್ ಲೈನ್ ವ್ಯವಸ್ಥೆ ಇಲ್ಲ. ಪ್ರತಿ ಅಂತಸ್ತಿನಲ್ಲಿ ರಾಸಾಯನಿಕ ಮಿಶ್ರಿತ ಬೆಂಕಿ ನಂದಿಸುವ ಆಕ್ಸಿಜನ್ ಸಿಲಿಂಡರ್ ವ್ಯವಸ್ಥೆ ಇಲ್ಲ. ಅಪಾರ್ಟ್ಮೆಂಟ್ ಅಕ್ಕಪಕ್ಕ ಟ್ರಾನ್ಸ್ ಫಾರ್ಮರ್ ಇರಬಾರದು. ಆದರೆ ಅಪಾರ್ಟ್ಮೆಂಟ್ ಕಾಂಪೌಂಡ್ ಒಳಗೇ ಟ್ರಾನ್ಸ್ ಫಾರ್ಮರ್ ಇದ್ದು ಇದ್ಯಾವುದನ್ನೂ ಬಿಬಿಎಂಪಿ ಪರಿಶೀಲನೆ ಮಾಡಿಯೇ ಇಲ್ಲ ಎನ್ನುವ ಆರೋಪ ಕೇಳಿಬಂದಿದೆ.
ಮನೆಯಲ್ಲಿದ್ದ ಎರಡೂ ಸಿಲಿಂಡರ್ ಕೂಡ ಸೇಫ್ ಆಗಿವೆ. ಹೀಗಾಗಿ ಎಲೆಕ್ಟ್ರಾನಿಕ್ ವಸ್ತುಗಳಿಂದ ಸ್ಫೋಟ ಉಂಟಾಗಿರುವ ಶಂಕೆ ವ್ಯಕ್ತವಾಗುತ್ತಿದೆ. ಪ್ರಾಥಮಿಕ ತನಿಖೆ ವೇಳೆ ಗ್ಯಾಸ್ನಿಂದ ಬೆಂಕಿ ಹೊತ್ತಿಲ್ಲ ಎಂಬುದು ಬೆಳಕಿಗೆ ಬಂದಿದೆ. ಹೀಗಾಗಿ ಯುಪಿಎಸ್, ಮೊಬೈಲ್ ಚಾರ್ಜಿಂಗ್, ದೇವರ ಮನೆಯ ದೀಪದ ಮೇಲೆ ಅನುಮಾನ ವ್ಯಕ್ತವಾಗುತ್ತಿದೆ.ಆಶ್ರಿತ್ ಅಪಾರ್ಟ್ಮೆಂಟ್ ನಲ್ಲಿ ಭೀಮಸೇನ್ ಅವರು ಪ್ಲ್ಯಾಟ್ ಅನ್ನು 2018ರಲ್ಲಿ ಖರೀದಿಸಿದ್ದು ಬೆಂಕಿ ಬಿದ್ದ ಬಳಿಕ ಪತಿ ಭೀಮಸೇನ್ರಿಗೆ ಪತ್ನಿ ಭಾಗ್ಯ ರೇಖಾ ಕರೆ ಮಾಡಿದ್ದಾರೆ. ಒಳಗೆ ಬೆಂಕಿ ಬಿದ್ದಿದೆ ಬೇಗ ಬನ್ನಿ ಎಂದು ಕೂಗಿಕೊಂಡಿದ್ದಾರೆ.ಭೀಮಸೇನ್ ಬರುವ ಮೊದಲೇ ಆಗ್ನಿ ವ್ಯಾಪಿಸಿ ಆಗ್ನಿ ಶಾಮಕ ದಳ ಕಾರ್ಯಾಚರಣೆ ನಡೆಸುವಷ್ಟರಲ್ಲಿ ತಾಯಿ-ಮಗಳು ಇಬ್ಬರು ಸಜೀವ ದಹನವಾಗಿದ್ದಾರೆ.
ಮೃತ ತಾಯಿ-ಮಗಳ ಮೃತದೇಹದ ಮರಣೋತ್ತರ ಪರೀಕ್ಷೆಯನ್ನು ಸೇಂಟ್ ಜಾನ್ ಆಸ್ಪತ್ರೆಯಲ್ಲಿ ನೆರವೇರಿಸಿ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ಈ ನಡುವೆ ಅಗ್ನಿ ದುರಂತದ ಮನೆ ಮಾಲೀಕ ಬೇಗೂರು ಪೊಲೀಸರಿಗೆ ನಿನ್ನೆ ರಾತ್ರಿಯೇ ದೂರು ದಾಖಲಿಸಿದ್ದಾರೆ.
ಮನೆ ಮಾಲೀಕ ಭೀಮಸೇನ್ ರಾವ್ ಹಾಗೂ ಅಳಿಯ ಸಂದೀಪ್ ದೂರು ನೀಡಿ ಮನೆಯಲ್ಲಿ ಬೆಂಕಿ ಹೊತ್ತಿಕೊಂಡು ಮನೆ ಸಂಪೂರ್ಣವಾಗಿ ಸುಟ್ಟುಹೋಗಿದೆ. ಜೊತೆಗೆ ಪತ್ನಿ ಹಾಗೂ ತಾಯಿ ಸಾವನ್ನಪ್ಪಿದ್ದಾರೆ. ಬೆಂಕಿಗೆ ನಿಖರ ಕಾರಣ ತಿಳಿದುಬಂದಿಲ್ಲ.
ಈ ಸಂಬಂಧ ಬೊಮ್ಮನಹಳ್ಳಿ ವಲಯ ಜಂಟಿ ಆಯುಕ್ತ ರಾಮಕೃಷ್ಣ ಪ್ರತಿಕ್ರಿಯಿಸಿ, ಘಟನೆಯಿಂದ 2 ಪ್ಲ್ಯಾಟ್ ಗಳಿಗೆ ತುಂಬಾ ಹಾನಿಯಾಗಿವೆ. ಮನೆಯಲ್ಲಿದ್ದ 2 ಸಿಲಿಂಡರ್ ಗಳಿಗೆ ಯಾವುದೇ ಹಾನಿಯಾಗಿಲ್ಲ. ಬೆಂಕಿ ಯಾವ ರೀತಿ ಹೊತ್ತಿಕೊಂಡಿದೆ ಎನ್ನುವುದು ಬೆಳಕಿಗೆ ಬರಬೇಕಿದೆ. ಅಪಾರ್ಟ್ಮೆಂಟ್ ನಲ್ಲಿ 72 ಫ್ಲ್ಯಾಟ್ ಇದೆ ಎಂದು ತಿಳಿಸಿದ್ದಾರೆ.