Home ಕ್ರೀಡೆ ಇಂದಿನಿಂದ ಬಾಂಗ್ಲಾದೇಶ -ಭಾರತ ಏಕದಿನ ಸರಣಿ

ಇಂದಿನಿಂದ ಬಾಂಗ್ಲಾದೇಶ -ಭಾರತ ಏಕದಿನ ಸರಣಿ

ಬಾಂಗ್ಲಾದೇಶ ಮತ್ತು ಭಾರತ ತಂಡಗಳ ನಡುವಿನ 3 ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯ ಮೀರ್‌ಪುರ್‌ನಲ್ಲಿ ಭಾನುವಾರ ನಡೆಯಲಿದೆ.

ನಾಯಕ ರೋಹಿತ್‌ ಶರ್ಮಾ ತಂಡಕ್ಕೆ ಮರಳಿದ್ದು, ಶರ್ಮಾ ಜೊತೆ ಶಿಖರ್‌ ಧವನ್‌ ಅಥವಾ ಕೆ. ಎಲ್‌ ರಾಹುಲ್‌ ನಡುವೆ ಇನ್ನಿಂಗ್ಸ್‌ ಆರಂಭಿಸುವ ಸಾಧ್ಯತೆ ಇದೆ.

7 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಟೀಮ್‌ ಇಂಡಿಯಾ ಬಾಂಗ್ಲಾ ನೆಲದಲ್ಲಿ ಏಕದಿನ ಪಂದ್ಯವನ್ನಾಡುತ್ತಿದೆ.  ಐಸಿಸಿ ಏಕದಿನ ವಿಶ್ವಕಪ್‌ ಮುಂದಿನ ವರ್ಷ ಭಾರತದಲ್ಲಿ ನಡೆಯಲಿದ್ದು, ಈ ಹಿನ್ನಲೆಯಲ್ಲಿ ಬಲಿಷ್ಠ ತಂಡ ಕಟ್ಟಲು ಭಾರತ ಈಗಾಗಲೇ ಯೋಜನೆ ಹಾಕಿಕೊಂಡಿದೆ.
ಟೀಮ್ ಇಂಡಿಯಾದಲ್ಲಿ ಆರಂಭಿಕ ಸೇರಿದಂತೆ ಎಲ್ಲಾ ಸ್ಥಾನಗಳಿಗೂ ಆಟಗಾರರ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಹೀಗಾಗಿ ಆಡುವ ಹನ್ನೊಂದರ ಬಳಗದ ಆಯ್ಕೆ ದ್ರಾವಿಡ್-ರೋಹಿತ್ ಶರ್ಮಾ ಪಾಲಿಗೆ ಸವಾಲೆನಿಸಿದೆ.
3ನೇ ಕ್ರಮಾಂಕದಲ್ಲಿ ವಿರಾಟ್‌ ಕೊಹ್ಲಿ ಆಡಲಿದ್ದಾರೆ. ಆ ನಂತರದ ಸ್ಥಾನಕ್ಕೆ ರಿಷಭ್‌ ಪಂತ್‌, ಶ್ರೇಯಸ್‌ ಅಯ್ಯರ್‌, ರಜತ್‌ ಪಾಟೀದಾರ್‌, ಇಶಾನ್‌ ಕಿಶನ್‌ ರೇಸ್‌ನಲ್ಲಿದ್ದಾರೆ.

ಆಲ್‌ರೌಂಡರ್‌ ವಿಭಾಗದಲ್ಲೂ ಅಕ್ಷರ್‌ ಪಟೇಲ್‌, ವಾಷಿಂಗ್ಟನ್‌ ಸುಂದರ್‌ ಹಾಗೂ ಶಹಭಾಝ್‌ ಅಹ್ಮದ್‌ ನಡುವೆ ಆಯ್ಕೆ ಸುಲಭವಲ್ಲ. ವೇಗದ ಬೌಲಿಂಗ್‌ ವಿಭಾಗದಲ್ಲೂ ದೀಪಕ್‌ ಚಾಹರ್‌, ಮುಹಮ್ಮದ್‌ ಸಿರಾಜ್‌, ಶಾರ್ದೂಲ್‌ ಠಾಕೂರ್‌ ಹಾಗೂ ಚೊಚ್ಚಲ ಏಕದಿನ ಪಂದ್ಯವನ್ನಾಡುವ ನಿರೀಕ್ಷೆಯಲ್ಲಿ ಕುಲ್‌ದೀಪ್‌ ಸೆನ್‌ ಇದ್ದಾರೆ.

ಅನುಭವಿ ಮುಹಮ್ಮದ್‌ ಶಮಿ ಗಾಯದ ಕಾರಣ ಟೂರ್ನಿಯಿಂದ ಹೊರನಡೆದಿದ್ದು, ಅವರ ಸ್ಥಾನಕ್ಕೆ ಉಮ್ರಾನ್‌ ಮಲಿಕ್‌ ಆಯ್ಕೆಯಾಗಿದ್ದಾರೆ. ಆದರೆ ಮಲಿಕ್‌ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವ ಸಾಧ್ಯತೆಯಿಲ್ಲ.

ಪಂದ್ಯ ಆರಂಭ: ಬೆಳಗ್ಗೆ 11.30

ಸಂಭಾವ್ಯ ತಂಡ

ಭಾರತ : ರೋಹಿತ್ ಶರ್ಮಾ (ನಾಯಕ), ಶಿಖರ್ ಧವನ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ರಿಷಬ್ ಪಂತ್ (ವಿಕೆಟ್‌ ಕೀಪರ್), ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ದೀಪಕ್‌ ಚಾಹರ್, ಮುಹಮ್ಮದ್ ಸಿರಾಜ್

ಬಾಂಗ್ಲಾದೇಶ : ಲಿಟ್ಟನ್ ದಾಸ್ (ನಾಯಕ), ನಜ್ಮುಲ್ ಹುಸೈನ್ ಶಾಂಟೊ, ಶಕೀಬ್ ಅಲ್ ಹಸನ್, ಮುಶ್ಫಿಕರ್ ರಹೀಮ್, ಅಫೀಫ್ ಹುಸೈನ್, ಯಾಸಿರ್ ಅಲಿ, ಮುಹಮ್ಮದುಲ್ಲಾ, ಮೆಹ್ದಿ ಹಸನ್ ಮಿರಾಜ್, ಮುಸ್ತಫಿಜುರ್ ರೆಹಮಾನ್, ಇಬಾದತ್‌ ಹುಸೈನ್, ಹಸನ್ ಮುಹಮ್ಮದ್.

Join Whatsapp
Exit mobile version