ಬೆಂಗಳೂರು: ವ್ಯಾಗನರ್ ಕಾರಿಗೆ ಹಿಂದಿನಿಂದ ಬಂದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಸಂಭವಿಸಿದ ಸರಣಿ ಅಪಘಾತದಲ್ಲಿ ನಾಲ್ವರು ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ಬನ್ನೇರುಘಟ್ಟ-ತುಮಕೂರು ನೈಸ್ ರಸ್ತೆಯಲ್ಲಿ ಶುಕ್ರವಾರ ತಡರಾತ್ರಿ ಸಂಭವಿಸಿದೆ.
ಅಪಘಾತದ ರಭಸಕ್ಕೆ ಕೆಂಪು ಬಣ್ಣದ ವ್ಯಾಗನರ್ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಕಾರಿನಲ್ಲಿದ್ದ ಇಬ್ಬರು ಪುರುಷರು ಮತ್ತು ಇಬ್ಬರು ಮಹಿಳೆಯರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಮೃತರನ್ನು ಕೇರಳ ಮೂಲದ ಫಾದಿಲ್, ಆದರ್ಶ್ ಹಾಗೂ ಶಿಲ್ಪಾ ಎಂದು ಗುರುತಿಸಲಾಗಿದ್ದು, ಓರ್ವ ಯುವತಿಯ ಗುರುತು ಪತ್ತೆಯಾಗಿಲ್ಲ.
ಟ್ರಾಫಿಕ್ ಜಾಮ್ ಕಾರಣದಿಂದಾಗಿ ವಾಹನಗಳು ನಿಧಾನವಾಗಿ ಚಲಿಸುತ್ತಿದ್ದ ವೇಳೆ ಹಿಂದಿನಿಂದ ವೇಗವಾಗಿ ಬಂದ
ತಮಿಳುನಾಡು ನೋಂದಣಿಯ ಲಾರಿಯೊಂದು ವ್ಯಾಗನರ್ ಕಾರಿಗೆ ಗುದ್ದಿದೆ. ಪರಿಣಾಮ ವ್ಯಾಗನರ್-ಕ್ವಾಲಿಸ್-ಸ್ವಿಫ್ಟ್ ಕಾರು ಸೇರಿದಂತೆ 6 ವಾಹನಗಳ ನಡುವೆ ಸರಣಿ ಅಪಘಾತ ಸಂಭವಿಸಿದೆ.
ಸರಣಿ ಅಪಘಾತದ ಪರಿಣಾಮ ನೈಸ್ ರಸ್ತೆಯಲ್ಲಿ ಸುಮಾರು ಎಂಟು ಕಿ.ಮೀ.ನಷ್ಟು ಟ್ರಾಫಿಕ್ ಜಾಮ್ ಉಂಟಾಗಿತ್ತು.
ಕುಮಾರಸ್ವಾಮಿ ಲೇಔಟ್ ಸಂಚಾರ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಅಪಘಾತಕ್ಕೀಡಾದ ವಾಹನಗಳನ್ನು ತೆರವುಗೊಳಿಸಿ, ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.