ಬೆಂಗಳೂರು: ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟಿರುವುದಾಗಿ ದುಷ್ಕರ್ಮಿಯೊಬ್ಬ ಮಾಡಿದ ಬೆದರಿಕೆ ಕರೆಯಿಂದಾಗಿ ನಿಲ್ದಾಣದಲ್ಲಿ ಕೆಲ ಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು.
ಪೊಲೀಸ್ ನಿಯಂತ್ರಣ ಕೊಠಡಿಗೆ ಇಂದು ಮುಂಜಾನೆ 3.30ರ ವೇಳೆ ದುಷ್ಕರ್ಮಿಯೊಬ್ಬ ಕರೆ ಮಾಡಿ, ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬಾಂಬ್ ಇಟ್ಟಿರುವುದಾಗಿ ಹೇಳಿದ್ದಾನೆ.
ಈ ಹಿನ್ನೆಲೆಯಲ್ಲಿ ಏರ್ ಲೈನ್ಸ್ ಗೇಟ್, ಟರ್ಮಿನಲ್ ಮತ್ತು ವಿಮಾನ ನಿಲ್ದಾಣದಲ್ಲಿ ತೀವ್ರ ತಪಾಸಣೆ ನಡೆಸಲಾಯಿತು.
ಬಾಂಬ್ ನಿಷ್ಟ್ರಿಯ ದಳ, ಶ್ವಾನ ದಳ ಸ್ಥಳಕ್ಕೆ ಧಾವಿಸಿ ವಿಮಾನ ನಿಲ್ದಾಣದ ಇಂಚಿಂಚೂ ತಪಾಸಣೆ ನಡೆಸಲಾಗಿದ್ದು,ಯಾವುದೇ ಅನುಮಾನಸ್ಫದವಾದ ವಸ್ತು ಕಂಡುಬಂದಿಲ್ಲ. ತೀವ್ರ ತಪಾಸಣೆಯಲ್ಲಿ ಅದು ಹುಸಿ ಕರೆಯಾಗಿತ್ತು ಪರಿಶೀಲನೆಯಲ್ಲಿ ಪತ್ತೆಯಾಗಿದೆ.
ಈಶಾನ್ಯ ವಿಭಾಗ ಡಿಸಿಪಿ ಡಾ. ಅನೂಪ್ ಎ. ಶೆಟ್ಟಿ ಅವರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.
ಬಾಂಬ್ ಕರೆ ಬಂದ ತಕ್ಷಣವೇ ಸ್ಥಳದಲ್ಲಿ ತೀವ್ರ ಶೋಧ ನಡೆಸಲಾಗಿದ್ದು ನಿಲ್ದಾಣದಲ್ಲಿ ಯಾವುದೇ ಅನುಮಾನಸ್ಪದ ವಸ್ತು ಕಂಡುಬಂದಿಲ್ಲ. ಇದರಿಂದಾಗಿ ಇದೊಂದು ಹುಸಿಬಾಂಬ್ ಎನ್ನುವ ನಿರ್ಧಾರಕ್ಕೆ ಬರಲಾಗಿದ್ದು, ಹುಸಿಬಾಂಬ್ ಕರೆಯ ಮಾಡಿದ ದುಷ್ಕರ್ಮಿಯ ಬಂಧನಕ್ಕೆ ತೀವ್ರ ಶೋಧ ನಡೆಸಲಾಗಿದೆ ಎಂದು ಶೆಟ್ಟಿ ತಿಳಿಸಿದ್ದಾರೆ.