ಬಣಕಲ್|ಮತ್ತೆ ಅಬ್ಬರಿಸಿದ ಹುಲಿ; ಜಾನುವಾರು ಸಾವು

ಮೂಡಿಗೆರೆ: ಹುಲಿಯೊಂದು ದನದ ಮೇಲೆ ದಾಳಿ ನಡೆಸಿ ಕೊಂದು ಹಾಕಿದ ಘಟನೆ ಬಣಕಲ್ ಸಮೀಪದ ಬಿ.ಹೊಸಹಳ್ಳಿಯಲ್ಲಿ  ನಡೆದಿದೆ.

ನಿರಂಜನ್ ಎಂಬವರ ದನ ಹುಲಿ ದಾಳಿಗೊಳಗಾಗಿದ್ದು, ಇದೀಗ ಗ್ರಾಮದಲ್ಲಿ ಹುಲಿಯ ಸಂಚಾರ  ಭಯದ ವಾತಾವರಣ ಸೃಷ್ಟಿಸಿದೆ.  ಹಿಂದೆ ಅನೇಕ ದನಗಳು ಹುಲಿಯ ಪಾಲಾಗಿದ್ದು ಗ್ರಾಮಸ್ಥರು ಹುಲಿಯ ಸ್ಥಳಾಂತರಕ್ಕೆ ಒತ್ತಾಯಿಸಿದ್ದರು.ಆದರೆ ಹುಲಿಯು ಮರಿಗಳ ಜತೆ ಇರುವುದರಿಂದ ಸ್ಥಳಾಂತರ ಮಾಡುವುದು ಅಸಾಧ್ಯವಾಗಿದೆ. ಹುಲಿಯನ್ನು ಕಾಡಿಗೆ ಓಡಿಸಲು ಪ್ರಯತ್ನಿಸುವುದಾಗಿ ಎಸಿಎಫ್ ರಾಜೇಶ್ ನಾಯ್ಕ್ ಭರವಸೆ ನೀಡಿ ಪಟಾಕಿ ಸಿಡಿಸಿ ಹುಲಿಯನ್ನು  ಅರಣ್ಯ ಸಿಬ್ಬಂದಿ ಕಾಡಿಗೆ ಓಡಿಸಿದ್ದರು.ಆದರೆ ಎರಡೂವರೆ ತಿಂಗಳ ನಂತರ ಹುಲಿ ಮತ್ತೆ ಗ್ರಾಮಕ್ಕೆ ಮರಳಿರುವುದು ಅರಣ್ಯ ಇಲಾಖೆಗೆ ತಲೆನೋವಾಗಿ ಪರಿಣಮಿಸಿದೆ.

- Advertisement -

ಬಿ.ಹೊಸಹಳ್ಳಿ,ಬಾನಳ್ಳಿ,ಹೊಕ್ಕಳ್ಳಿ,ಭಾರತೀಬೈಲ್ ಸುತ್ತಮುತ್ತ ಜನರು ಹುಲಿಯಿಂದ ಭಯಭೀತರಾಗಿದ್ದಾರೆ.ಈ ಹಿಂದೆ ಅನೇಕ ದನಗಳು ಹುಲಿಯ ಪಾಲಾಗಿವೆ.ಈಗ ಕಾಫಿ ಕೊಯ್ಲು ಸಮಯವಾದ್ದರಿಂದ ಹುಲಿ ದಾಳಿಯ ಕಾರಣದಿಂದ ಕಾರ್ಮಿಕರು ತೋಟದ ಕೆಲಸಕ್ಕೆ ಬರಲು ಹಿಂಜರಿಯುತ್ತಿದ್ದಾರೆ. ಜನರ ಜೀವಕ್ಕೆ ಕುತ್ತು ತರುವ ಮೊದಲು ಹುಲಿ ದಾಳಿಗೆ ಬ್ರೇಕ್ ಹಾಕಬೇಕು ಎಂದು ಗ್ರಾಮಸ್ಥ ಶ್ರೇಯಸ್ ಗೌಡ ಒತ್ತಾಯಿಸಿದ್ದಾರೆ.