Home ಟಾಪ್ ಸುದ್ದಿಗಳು ಬೆಂಗಳೂರಿನಲ್ಲಿ ಅಕ್ರಮ ಕ್ಯಾಸಿನೊ, ಕ್ಲಬ್ ಗಳಿಗೆ ಕಡಿವಾಣ: ಗೃಹ ಸಚಿವ ಆರಗ ಜ್ಞಾನೇಂದ್ರ ಸೂಚನೆ

ಬೆಂಗಳೂರಿನಲ್ಲಿ ಅಕ್ರಮ ಕ್ಯಾಸಿನೊ, ಕ್ಲಬ್ ಗಳಿಗೆ ಕಡಿವಾಣ: ಗೃಹ ಸಚಿವ ಆರಗ ಜ್ಞಾನೇಂದ್ರ ಸೂಚನೆ

ಬೆಂಗಳೂರು: ಅಂತಾರಾಷ್ಟ್ರೀಯ ನಗರವಾಗಿ ಬೆಳೆಯುತ್ತಿರುವ ಬೆಂಗಳೂರು ನಗರದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಿಕೊಳ್ಳಬೇಕು , ರೌಡಿಗಳನ್ನೂ ಮಟ್ಟ ಹಾಕಬೇಕು, ಹಾಗೂ ಸುಳ್ಳು ದಾಖಲೆ ಪತ್ರ ತಯಾರಿಸಿ, ಸರಕಾರಿ ಹಾಗೂ ನಾಗರಿಕರ ಭೂಮಿ ಮತ್ತು ನಿವೇಶನಗಳನ್ನು ಕಬಳಿಸುವವರ ವಿರುದ್ಧ ನಿಷ್ಠುರವಾಗಿ ಕ್ರಮ ಜರುಗಿಸಬೇಕೆಂದು ಗೃಹ ಸಚಿವ ಆರಗ ಜ್ಞಾನೇಂದ್ರ ಪೊಲೀಸರಿಗೆ ಕಟ್ಟು ನಿಟ್ಟಿನ ನಿರ್ದೇಶನ ನೀಡಿದ್ದಾರೆ.


ಸಚಿವರು ಇಂದು, ಬೆಂಗಳೂರು ನಗರ ಪೊಲೀಸ್ ಆಯುಕ್ತ ವ್ಯಾಪ್ತಿಯ, ಪರೀಶೀಲನಾ ಸಭೆ ನಡೆಸಿ, ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡುತ್ತ, ಸಮಾಜದ ಅಶಾಂತಿಗೆ ಕಾರಣವಾಗುವ ಎಲ್ಲ ಅಕ್ರಮ ಕ್ಲಬ್, ಕ್ಯಾಸಿನೋಗಳೂ ಹಾಗೂ ಇನ್ನಿತರ ಕಾನೂನುಬಾಹಿರವಾಗಿ ನಡೆಯುವ ಎಲ್ಲ ರೀತಿಯ ಅಕ್ರಮಗಳನ್ನು ತಡೆಯಬೇಕು, ನಾಗರೀಕರ, ಅದರಲ್ಲಿಯೂ ಮಹಿಳೆಯರ ಹಾಗೂ ಮಕ್ಕಳ ರಕ್ಷಣೆಗೆ ಕ್ರಮ ತೆಗೆದುಕೊಳ್ಳಬೇಕು ಎಂದು ಸೂಚಿಸಿದರು.


“ನಾಗರಿಕರ ರಕ್ಷಣೆಗೆ ಹತ್ತು ಹಲವು ಕಾನೂನುಗಳಿದ್ದು ಅವುಗಳಿಗೆ ಮಾನ್ಯತೆ ಬರಬೇಕಾದರೆ, ಪೊಲೀಸರು ಕಟ್ಟು ನಿಟ್ಟಾಗಿ ಜಾರಿಗೆ ನೀಡಬೇಕು, ಹಾಗಾದರೆ ಮಾತ್ರ ಸಾರ್ವಜನಿಕರಿಗೆ ಪೊಲೀಸ್ ವ್ಯವಸ್ಥೆ ಬಗ್ಗೆ ವಿಶ್ವಾಸ ಮೂಡುತ್ತದೆ” ಎಂದು ಸಚಿವರು ಹೇಳಿದರು.
ಅಕ್ರಮ ಕ್ಲಬ್ ಮತ್ತು ಕ್ಯಾಸಿನೋಗಳು ನಗರದಲ್ಲಿ ನಡೆಯುತ್ತಿರುವ ಬಗ್ಗೆ, ವರದಿಗಳಿವೆ, ಅವುಗಳನ್ನು ನಿರ್ಧಾಕ್ಷಿಣ್ಯವಾಗಿ ನಿಲ್ಲಿಸಬೇಕು, ಹಾಗೂ ಇದಕ್ಕಾಗಿ ವಿಶೇಷ ಕಾರ್ಯಪಡೆ ರಚಿಸಿ ಕ್ರಮ ತೆಗೆದುಕೊಳ್ಳಬೇಕು, ಎಂದು ಪೊಲೀಸರಿಗೆ ನಿರ್ದೇಶಿಸಿದ್ದೇನೆ, ಎಂದು ಸಚಿವರು ಹೇಳಿದರು.


ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಚಿವರು, ಅಲ್ಲಲ್ಲಿ, ಪೊಲೀಸರು, ನೆಲಗಳ್ಳರ ಜೊತೆಗೆ ಶಾಮೀಲಾಗಿ ಮುಗ್ಧ ಜನರನ್ನು ವಂಚಿಸುವುದರ ಬಗ್ಗೆ ದೂರುಗಳಿದ್ದು, ಅಂಥ ಅಧಿಕಾರಿಗಳನ್ನು ಗುರುತಿಸಿ, ಅವರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಕಟ್ಟು ನಿಟ್ಟಿನ ಸೂಚನೆ ನೀಡಿದ್ದೇನೆ, ಎಂದು ಸಚಿವರು ತಿಳಿಸಿದರು.


ನಗರದಲ್ಲಿ ಮಾದಕ ವಸ್ತುಗಳ, ಕಳ್ಳ ಸಾಗಣೆ, ವಿತರಣೆ, ಹಾಗೂ ಬಳಕೆ ವಿರುದ್ಧ, ಕಠಿಣ ಕ್ರಮ ತೆಗೆದುಕೊಳ್ಳುವ ಬಗ್ಗೆ ಹಿರಿಯ ಪೊಲೀಸರಿಗೆ ತಾಕೀತು ಮಾಡಲಾಗಿದ್ದು, “ಮಾದಕ ವಸ್ತುಗಳ ಜಾಲವನ್ನು ಮೂಲೋತ್ಪಾಟನೆ ಮಾಡಲು ಸಾಧ್ಯವಾದ ಎಲ್ಲ ಕ್ರಮಗಳನ್ನು ಜರುಗಿಸಲಾಗುವುದು” ಎಂದು ಸಚಿವರು ಹೇಳಿದರು.


ನಗರದಲ್ಲಿ, ಅಕ್ರಮವಾಗಿ ನೆಲಸಿರುವ, ಹಾಗೂ ವೀಸಾ ಅವಧಿ ಮುಗಿದಿರುವ ವಿದೇಶಿ ನಾಗರಿಕರನ್ನು ಪ್ರತಿಯೊಂದು ಠಾಣೆ ವ್ಯಾಪ್ತಿಯಲ್ಲಿ, ಗುರುತಿಸುವ ಹಾಗೂ ಅವಧಿ ಮುಗಿದಿದ್ದರೂ ವಾಸಿಸುತ್ತಿರುವ ವಿದೇಶಿಗರನ್ನು ಹೊರ ಹಾಕುವ ಅಗತ್ಯತೆ ಬಗ್ಗೆ ತಿಳಿ ಹೇಳಿದ್ದೇನೆ, ಹಾಗೂ ಅಕ್ರಮ ವಿದೇಶಿ ನಾಗರಿಕರ ಮೇಲೆ ಸತತವಾಗಿ ನಿಗಾ ಇಡುವಂತೆ ತಿಳಿಸಿದ್ದೇನೆ ಎಂದು ಸಚಿವರು ಹೇಳಿದರು.
ವಿದೇಶಿ ನಾಗರಿಕರಿಗೆ, ಸ್ಥಳೀಯ ವ್ಯಕ್ತಿಗಳು ಹಾಗೂ ಕೆಲವು ಸರಕಾರಿ ಅಧಿಕಾರಿಗಳು, ಆಧಾರ್ ಮತ್ತು ಪಡಿತರ ಚೀಟಿಗಳನ್ನು ಅಕ್ರಮವಾಗಿ ಪಡೆದುಕೊಳ್ಳಲು ನೆರವಾಗಿರುವ ಬಗ್ಗೆ ವರದಿಗಳಿದ್ದು, ಅಂತಹ ಸರಕಾರಿ ನೌಕರರ ವಿರುದ್ಧ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳುವಂತೆಯೂ ನಿರ್ದೇಶಿಸಿದ್ದೇನೆ, ಎಂದು ಸಚಿವರು ತಿಳಿಸಿದರು.


ಇದಕ್ಕೂ ಮೊದಲು, ಸಚಿವರು, ಆನ್ಲೈನ್ ಶಸ್ತಾಸ್ತ್ರ ಪರವಾನಗಿ ಆಪ್ ಒಂದನ್ನು ಚಾಲನೆ ನೀಡಿದರು. ಇನ್ನು ಮುಂದೆ ನಗರದಲ್ಲಿ, ನೋಂದಾಯಿಸಿರುವ ಶಸ್ತ್ರಾಸ್ತ್ರ ಪರವಾನಗಿ ಹೊಂದಿದ ನಾಗರಿಕರು ಆನ್ಲೈನ್ ಮೂಲಕವೇ, ನವೀಕರಣ ಹಾಗೂ ವಾರ್ಷಿಕ ಫೀ ಅನ್ನು ಕೆಟ್ಟಬಹುದು. ಇದಕ್ಕಾಗಿ ಪೊಲೀಸ್ ಕಚೇರಿಗೆ ಭೇಟಿ ನೀಡುವ ಅಗತ್ಯ ಬೀಳುವುದಿಲ್ಲ. ನಗರದಲ್ಲಿ ಸುಮಾರು 8೦೦೦ ಪರಾವನಾಗಿ ದಾರರು ಈ ಪ್ರಯೋಜನ ಪಡೆಯಲಿದ್ದಾರೆ, ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್, ತಿಳಿಸಿದರು.

Join Whatsapp
Exit mobile version