Home ಟಾಪ್ ಸುದ್ದಿಗಳು ನದೆಹ್ದಿನ್‌ಗೆ ನಿಷೇಧ: ಅಧ್ಯಕ್ಷೀಯ ಚುನಾವಣೆಯಲ್ಲಿ ಪುಟಿನ್ ಜಯ ಬಹುತೇಕ ಖಚಿತ!

ನದೆಹ್ದಿನ್‌ಗೆ ನಿಷೇಧ: ಅಧ್ಯಕ್ಷೀಯ ಚುನಾವಣೆಯಲ್ಲಿ ಪುಟಿನ್ ಜಯ ಬಹುತೇಕ ಖಚಿತ!

ಮಾಸ್ಕೊ: ಮುಂದಿನ ತಿಂಗಳು ರಶ್ಯದ ಅಧ್ಯಕ್ಷೀಯ ಚುನಾವಣೆ‌ ನಡೆಯಲಿದ್ದು, ಯುದ್ಧ ವಿರೋಧಿ ಮುಖಂಡ ಬೋರಿಸ್ ನದೆಹ್ದಿನ್ ಸ್ಪರ್ಧಿಸುವುದನ್ನು ರಶ್ಯದ ಚುನಾವಣಾ ಆಯೋಗ ತಿರಸ್ಕರಿಸಿದೆ. ಈ ಮೂಲಕ ಚುನಾವಣೆಗೆ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರನ್ನು ಬೆಂಬಲಿಸುವ ಮೂರು ಪಕ್ಷಗಳ ಅಭ್ಯರ್ಥಿಗಳು ಮಾತ್ರ ಔಪಚಾರಿಕವಾಗಿ ಸ್ಪರ್ಧಿಸುತ್ತಿದ್ದಾರೆ. ಆದ್ದರಿಂದ ಪುಟಿನ್ ಗೆಲುವು ಬಹುತೇಕ ಖಚಿತ ಎನ್ನಲಾಗಿದೆ.

ಪುಟಿನ್ ಅವರ ಬದ್ಧ ಪ್ರತಿಸ್ಪರ್ಧಿಯೆಂದು ಗುರುತಿಸಿಕೊಂಡಿದ್ದ ಬೋರಿಸ್ ಮಾರ್ಚ್ 15ರಿಂದ 17ರವರೆಗೆ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಪುಟಿನ್‍ರನ್ನು ಸೋಲಿಸುವ ಆತ್ಮವಿಶ್ವಾಸದಲ್ಲಿದ್ದರು. ಎರಡು ದಶಕಗಳಿಗೂ ಅಧಿಕ ಸಮಯದಿಂದ ಅಧಿಕಾರದಲ್ಲಿರುವ ಪುಟಿನ್ ಖುರ್ಚಿ ಅಲ್ಲಾಡುತ್ತಿತ್ತು ಎಂದು ಹೇಳಲಾಗಿತ್ತು.

ಬೋರಿಸ್ ನದೆಹ್ದಿನ್ ಅವರ ನಾಮಪತ್ರವನ್ನು ಅನುಮೋದಿಸಿದ 1,05,000 ಜನರಲ್ಲಿ 9 ಸಾವಿರ ಜನರ ಹೆಸರು, ವಿಳಾಸ ಮತ್ತಿತರ ದಾಖಲೆಗಳಲ್ಲಿ ವ್ಯತ್ಯಾಸವಿದೆ. ತಪ್ಪಿನ ಪ್ರಮಾಣ 5 ಶೇ. ವನ್ನು ಮೀರಿದ್ದರೆ ನಾಮಪತ್ರವನ್ನು ತಿರಸ್ಕರಿಸಬಹುದಾದ ನಿಯಮದ ಪ್ರಕಾರ ಅಧ್ಯಕ್ಷೀಯ ಚುನಾವಣೆಯಲ್ಲಿ ಅಭ್ಯರ್ಥಿಯಾಗಿದ್ದ ಬೋರಿಸ್ ನದೆಹ್ದಿನ್ ಹೆಸರು ತಿರಸ್ಕರಿಸಲಾಗಿದೆ ಎಂದು ಗುರುವಾರ ನಡೆದ ರಶ್ಯ ಕೇಂದ್ರ ಚುನಾವಣಾ ಆಯೋಗದ ಸಭೆಯ ಬಳಿಕ ಘೋಷಿಸಲಾಗಿದೆ. ಇದನ್ನು ಸುಪ್ರೀಂಕೋರ್ಟ್ ನಲ್ಲಿ ಪ್ರಶ್ನಿಸುವುದಾಗಿ ಬೋರಿಸ್ ನದೆಹ್ದಿನ್ ಹೇಳಿದ್ದಾರೆ.

Join Whatsapp
Exit mobile version