Home ಟಾಪ್ ಸುದ್ದಿಗಳು ಯುದ್ಧಪೀಡಿತ ಗಾಝಾಪಟ್ಟಿಯಲ್ಲಿ ತ್ಯಾಗ ಬಲಿದಾನದ ಸಂಕೇತವಾದ ಈದ್ ಆಚರಣೆಗೆ ಸಿದ್ಧತೆ

ಯುದ್ಧಪೀಡಿತ ಗಾಝಾಪಟ್ಟಿಯಲ್ಲಿ ತ್ಯಾಗ ಬಲಿದಾನದ ಸಂಕೇತವಾದ ಈದ್ ಆಚರಣೆಗೆ ಸಿದ್ಧತೆ

ಗಾಝಪಟ್ಟಿ, ಜುಲೈ 19: ಎರಡು ತಿಂಗಳ ಹಿಂದೆ ಇಸ್ರೇಲ್ ಸೈನಿಕರೊಂದಿಗೆ ನಡೆದ ಭೀಕರ ಯುದ್ಧದಿಂದ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಫೆಲೆಸ್ತೀನ್ ಜನತೆ ದುಃಖದ ನಡುವೆಯೂ ಈ ಬಾರಿಯ ಈದ್ ಹಬ್ಬವನ್ನು ಸಂಭ್ರಮದಿಂದ ಆಚರಿಸಲು ಗಾಝಾಪಟ್ಟಿಯಲ್ಲಿ ಸಿದ್ಧತೆ ನಡೆಸಿದ್ದಾರೆ. ಈ ಮೂಲಕ ಪ್ರವಾದಿ ಇಬ್ರಾಹೀಮರ ತ್ಯಾಗ ಬಲಿದಾನವನ್ನು ಸ್ಮರಿಸಲು ಮುಂದಾಗಿದ್ದಾರೆ.

ತನ್ನ ಮಗನನ್ನು ಬಲಿಗೊಡಲು ಮುಂದಾದ ಪ್ರವಾದಿ ಇಬ್ರಾಹಿಮ್ ರ ತ್ಯಾಗ ಬಲಿದಾನವನ್ನು ಸ್ಮರಿಸುವ ಬಕ್ರೀದ್ ಹಬ್ಬವನ್ನು ಗಲ್ಫ್ ರಾಷ್ಟ್ರಗಳಲ್ಲಿ ಮಂಗಳವಾರ ಹಾಗೂ ಭಾರತ ಮತ್ತು ಇತರ ದೇಶಗಳಲ್ಲಿ ಬುಧವಾರ ಆಚರಿಸಲಾಗುತ್ತದೆ.

ಮೇ ತಿಂಗಳಲ್ಲಿ ಸತತ 11 ದಿನಗಳ ಕಾಲದ ಭೀಕರ ಹೋರಾಟದಲ್ಲಿ ಇಸ್ರೇಲ್ ನಡೆಸಿದ ಬಾಂಬ್ ದಾಳಿಯಿಂದ 2200 ಮನೆಗಳು ಧ್ವಂಸಗೊಂಡಿದ್ದು, 37,000 ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ ಎಂದು ಗಾಝಾದ ಹಮಾಸ್ ಸರ್ಕಾರ ತಿಳಿಸಿದೆ. ಇದೇ ವೇಳೇ 250 ಕ್ಕೂ ಅಧಿಕ ಫೆಲೆಸ್ತೀನಿಯನ್ನರು ಮತ್ತು 19 ಜನ ಇಸ್ರೇಲ್ ನಾಗರೀಕರು ಪ್ರಾಣ ಕಳೆದುಕೊಂಡಿದ್ದಾರೆ.

ಹಬ್ಬದ ಹಿನ್ನೆಲೆಯಲ್ಲಿ ಬಟ್ಟೆ, ಜಾನುವಾರು, ಅಗತ್ಯ ವಸ್ತುಗಳ ಬಿರುಸಿನ ಖರೀದಿ ಗಾಝಾ ಮಾರುಕಟ್ಟೆಯಲ್ಲಿ ಕಂಡುಬಂತು. ಆದರೆ ದಿಗ್ಬಂಧನ, ಯುದ್ಧ ಮತ್ತು ಕೊರೋನ ದಿಂದಾಗಿ ವ್ಯಾಪಾರ ಈ ಹಿಂದಿನಂತೆ ನಡೆಯುತ್ತಿಲ್ಲವೆಂದು ವ್ಯಾಪಾರಿಯೋರ್ವರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಜನರ ಹಿತದೃಷ್ಟಿಯಿಂದ ಶಾಂತಿ ನೆಲೆಗೊಳ್ಳಲಿಯೆಂಬುದು ನನ್ನ ಅನಿಸಿಕೆ ಎಂದು ಮತ್ತೋರ್ವ ವ್ಯಾಪಾರಿ ಆಶಾವಾದ ವ್ಯಕ್ತಪಡಿಸಿದ್ದಾರೆ.

Join Whatsapp
Exit mobile version