ಕುಂಬಳೆ: ಕಳೆದ ದಿನ ಎಸ್.ಡಿ.ಪಿ.ಐ ವಿರುದ್ಧ ಬಾಕುಡ ಸಮುದಾಯದವರು ಪತ್ರಿಕಾಗೋಷ್ಠಿಯಲ್ಲಿ ಮಾಡಿರುವ ಆರೋಪಗಳು ಆಧಾರ ರಹಿತ ಮತ್ತು ಪಕ್ಷದ ವಿರುದ್ಧದ ವ್ಯವಸ್ಥಿತ ಷಡ್ಯಂತ್ರದ ಭಾಗವಾಗಿದೆ ಎಂದು ಎಸ್.ಡಿ.ಪಿ.ಐ ಮಂಜೇಶ್ವರಂ ಮಂಡಲಾಧ್ಯಕ್ಷ ಅಶ್ರಫ್ ಬಡಾಜೆ ಆರೋಪಿಸಿದ್ದಾರೆ.
ಕುಂಬಳೆ ಪ್ರೆಸ್ ಪೋರಂ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಎಚ್ ಪಿ ಜಿಲ್ಲಾ ಕೇಂದ್ರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಫ್ಯಾಶಿಸ್ಟ್ ವಿರೋಧಿ ಮತಗಳ ಮೂಲಕ ಗೆದ್ದ ಶಾಸಕರು ಭಾಗವಹಿಸಿದ್ದು ಮತದಾರರಿಗೆ ಮಾಡಿದ ದ್ರೋಹವಾಗಿದೆ. ಈ ಬಗ್ಗೆ ಕ್ಷೇತ್ರದ ಜಾತ್ಯತೀತ ಮತದಾರರಿಂದ ವ್ಯಾಪಕ ಆಕ್ರೋಶ ವ್ಯಕ್ತವಾದಾಗ ಬೀಸುವ ದೊಣ್ಣೆಯಿಂದ ಪಾರಾಗುವ ತಂತ್ರವೆಂಬಂತೆ ಶಾಸಕರು ಇದನ್ನು ಎಸ್.ಡಿ.ಪಿ.ಐ ಮತ್ತು ಬಾಕುಡ ಸಮುದಾಯದ ನಡುವಿನ ಸಮಸ್ಯೆ ಎಂಬಂತೆ ಬಿಂಬಿಸಿದ್ದಾರೆ ಎಂದು ಟೀಕಿಸಿದರು.
ಶಾಸಕರಿಗೆ ನೈಜ ಹಿಂದೂಗಳು ಮತ್ತು ಹಿಂದುತ್ವದ ನಡುವಿನ ವ್ಯತ್ಯಾಸ ಗೊತ್ತಿಲ್ಲದಿರುವುದು ಖೇದಕರ. ಎಸ್.ಡಿ.ಪಿ.ಐ ವಿರುದ್ಧ ಬಾಕುಡ ಸಮುದಾಯವನ್ನು ಎತ್ತಿ ಕಟ್ಟುವ ಶಾಸಕರ ನಡೆ ರಾಜಕೀಯ ಸೋಗಲಾಡಿತನ ಎಂದು ಹೇಳಿದರು.
ಈ ಘಟನೆ ರಾಜ್ಯಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಕೆಲವು ರಾಜಕೀಯ ಪಕ್ಷಗಳ ರಾಜ್ಯ ನಾಯಕರ ಫೇಸ್ ಬುಕ್ ಪೇಜ್ ಗಳಲ್ಲಿ ಕಾಣಿಸಿಕೊಂಡಿದ್ದು, ಆಢಳಿತ ಪಕ್ಷದ ವಾಹಿನಿಯೂ ಇದರ ವರದಿ ಮಾಡಿದೆ. ಆ ಬಳಿಕವಷ್ಟೇ ಶಾಸಕರ ವಿರುದ್ಧ ಎಸ್.ಡಿ.ಪಿ.ಐ ಪ್ರತಿಕ್ರಿಯಿಸಿತ್ತು. ಆ ಪಕ್ಷದ ಅಥವಾ ವಾಹಿನಿಯ ವಿರುದ್ಧ ಸಮುದಾಯದ ಮುಖಂಡರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಪತ್ರಕರ್ತರು ಇದರ ಬಗ್ಗೆ ಬಾಕುಡ ಸಮುದಾಯದ ನೇತಾರರಲ್ಲಿ ಪ್ರಶ್ನಿಸಿದಾಗ ಅದರ ಕುರಿತು ಪ್ರತಿಕ್ರಿಯೆ ನೀಡದೆ ಪೂರ್ವಾಗ್ರಹ ಪೀಡಿತರಾಗಿ ಎಸ್.ಡಿ.ಪಿ.ಐ ಯನ್ನು ಮಾತ್ರ ಆರೋಪಿಸಿರುವುದು ಪಕ್ಷದ ವಿರುದ್ಧ ಶಾಸಕರು ಮತ್ತು ಇತರ ಕಾಣದ ಕೈಗಳ ವ್ಯವಸ್ಥಿತ ಷಡ್ಯಂತ್ರದ ಸಂಕೇತವಾಗಿದೆ ಎಂದು ಮುಖಂಡರು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಕುಂಬಳೆ ಪಂಚಾಯತ್ ಸದಸ್ಯ ಅನ್ವರ್ ಆರಿಕ್ಕಾಡಿ, ಕುಂಬಳೆ ಪಂಚಾಯತ್ ಅಧ್ಯಕ್ಷ ನಾಸರ್ ಬಂಬ್ರಾಣ, ಕಾರ್ಯದರ್ಶಿ ಸಲಾಂ ಕುಂಬಳೆ ಉಪಸ್ಥಿತರಿದ್ದರು.