ಬೆಂಗಳೂರು: ಧರ್ಮ-ಜಾತಿ ಆಧಾರದ ಮೇಲೆ ಜನರನ್ನು ವಿಘಟಿಸುವ ವಿಶ್ವ ಹಿಂದೂ ಪರಿಷತ್, ಬಜರಂಗದಳ ಸೃಷ್ಟಿಸುವ ಕೃತ್ಯವನ್ನು ಸಹಿಸುವ ಪ್ರಶ್ನೆಯೇ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, ‘ಕರಪತ್ರಗಳನ್ನು ಹಂಚಿ ಸಮಾಜ ಒಡೆಯುತ್ತಿರುವ ವಿಶ್ವ ಹಿಂದೂ ಪರಿಷತ್, ಬಜರಂಗದಳದ ಬಗ್ಗೆ ನನ್ನ ಹೇಳಿಕೆಯಲ್ಲಿ ಯಾವ ಬದಲಾವಣೆಯೂ ಇಲ್ಲ. ಧರ್ಮ-ಜಾತಿ ಆಧಾರದ ಮೇಲೆ ಜನರನ್ನು ವಿಘಟಿಸುವ ಇಂಥ ಸಂಘಟನೆಗಳ ಕಿಡಿಗೇಡಿಗಳ ಬಗ್ಗೆ ನನ್ನ ನಿಲುವು ಅಚಲ. ‘ಧರ್ಮೋದ್ಧಾರದ ಸೋಗಿನಲ್ಲಿ ಅಶಾಂತಿ’ ಸೃಷ್ಟಿಸುವ ಕೃತ್ಯವನ್ನು ಸಹಿಸುವ ಪ್ರಶ್ನೆಯೇ ಇಲ್ಲ” ಎಂದು ಬರೆದಿದ್ದಾರೆ.
ಜಗತ್ತಿಗೆ ಶಾಂತಿ ಸಂದೇಶ ಕೊಟ್ಟ ಕುವೆಂಪು ಅವರು ಜನಿಸಿದ ಶಿವಮೊಗ್ಗ ಜಿಲ್ಲೆಯಲ್ಲಿ ಪ್ರತಿ ಹಬ್ಬ-ಹರಿದಿನದಲ್ಲಿ ನೀವು ಮಾಡುತ್ತಿರುವುದೇನು? ಸೂಕ್ಷ್ಮ ಭಾವನೆಗಳನ್ನು ಕೆರಳಿಸಿ ʼಅಶಾಂತಿಯ ಅಶ್ವಮೇಧʼ ನಡೆಸುತ್ತಿದ್ದೀರಿ. ಬೆಂಕಿ ಹಾಕುವುದು, ಕಲ್ಲು ಹೊಡೆಯುವುದು ನನ್ನ ಅಥವಾ ನನ್ನ ಪಕ್ಷದ ಸಂಸ್ಕೃತಿ ಅಲ್ಲ ಎಂದು ಹೇಳಿದ್ದಾರೆ.
ನಿಮಗೆ ದೇಶ, ಸಂವಿಧಾನದ ಮೇಲೆ ಗೌರವ ಇಲ್ಲ. ಜನರೆಂದರೆ ನಿಮ್ಮ ಪಾಲಿಗೆ ʼಭಾವನೆಗಳ ದಾಳಗಳುʼ ಮಾತ್ರ. ನಿಜವಾದ ಹಿಂದೂ ಎಂದೂ ಸಮಾಜ ಒಡೆಯಲಾರ. “ಹಿಂದೂ ಎಂದರೆ ಎಲ್ಲರೂ ಒಂದು ಎನ್ನುವ ಆದರ್ಶ & ಪರಂಪರಾಗತ ನಂಬಿಕೆ. ಈ ನಂಬಿಕೆಯ ಮೇಲೆಯೇ ಭಾರತ ನಿಂತಿದೆ. ಭಾವನೆಗಳನ್ನು ಹೇರಿ ಭಾರತವನ್ನು ಒಡೆಯಲು ನಿಮ್ಮಿಂದ ಸಾಧ್ಯವಿಲ್ಲ” ಎಂದು ಬರೆದುಕೊಂಡಿದ್ದಾರೆ.