Home ಟಾಪ್ ಸುದ್ದಿಗಳು ಮುಸ್ಲಿಮ್ ಯುವಕರ ಹತ್ಯೆಯ ಹಿಂದೆ ಬಜರಂಗ ದಳದ ಮುಖಂಡ ಮೋನು ಮನೇಸರ್ ಕೈವಾಡ

ಮುಸ್ಲಿಮ್ ಯುವಕರ ಹತ್ಯೆಯ ಹಿಂದೆ ಬಜರಂಗ ದಳದ ಮುಖಂಡ ಮೋನು ಮನೇಸರ್ ಕೈವಾಡ

ಚಂಡೀಗಡ: ಮುಸ್ಲಿಮ್ ಯುವಕರಾದ ವಾರಿಸ್, ಜುನೈದ್, ನಾಸಿರ್ ಮುಂತಾದವರ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಹರಿಯಾಣದ ಬಜರಂಗ ದಳದ ಮುಖಂಡ ಮೋನು ಮನೇಸರ್ ಎಂಬುದು ಬಹಿರಂಗವಾಗಿದೆ. ಆತನ ಕುಕೃತ್ಯಗಳು ಈಗ ಒಂದೊಂದೇ ಬೆಳಕಿಗೆ ಬರುತ್ತಿವೆ.


2021ರ ಜುಲೈ 4ರಂದು ಮೋನು ಮನೇಸರ್ ಹರಿಯಾಣದ ಪಟೌಡಿಯಲ್ಲಿ ಹಿಂದೂ ಮಹಾಪಂಚಾಯತ್’ನಲ್ಲಿ ಹಿಂಸೆಗೆ ಕರೆ ಕೊಟ್ಟ ಭಾಷಣಕ್ಕೆ ವೀಡಿಯೋ ವೈರಲ್ ಆಗಿದೆ.
“ನಾವು ಇಲ್ಲಿ ಒಂದು ಪರಿಹಾರ ಹುಡುಕಬೇಕಾಗಿದೆ. ಲವ್ ಜಿಹಾದ್’ನಲ್ಲಿ ಒಳಗೊಂಡಿದ್ದಾರೆ ಎನ್ನುವ ಒಂದಷ್ಟು ಜನರ ಪಟ್ಟಿಯನ್ನು ನಮಗೆ ಕೊಡಿ. ನಾನು ಮತ್ತು ನನ್ನ ತಂಡ ಅವರನ್ನು ಸಾರ್ವಜನಿಕವಾಗಿ ಹೊಡೆಯುತ್ತೇವೆ. ನಾವು ಪೊಲೀಸ್ ಮೊಕದ್ದಮೆಗಳಿಗೆಲ್ಲ ಹೆದರುವುದಿಲ್ಲ. ನಮ್ಮ ದೊಡ್ಡಣ್ಣ ಕೂತಿದ್ದಾರಲ್ಲ! ನಾನು ಅವರ ಹೆಸರು ಹೇಳುವುದಿಲ್ಲ, ಆದರೆ ಅವರು ನಮ್ಮ ರಕ್ಷಣೆಗಿದ್ದಾರೆ. ಯಾರು ಲವ್ ಜಿಹಾದ್ ಮಾಡುತ್ತಾರೋ, ಯಾರು ನಮ್ಮ ಹುಡುಗಿಯರನ್ನು ಚುಡಾಯಿಸುತ್ತಾರೋ ನಮ್ಮ ತಂಡ ಅವರನ್ನು ಗುದ್ದಿ ಹಾಕಲಿದೆ. ನಮ್ಮ ಧರ್ಮದತ್ತ ಬೊಟ್ಟು ಮಾಡುವ ಯಾರನ್ನು ಕೂಡ ನಾವು ಕ್ಷಮಿಸುವುದಿಲ್ಲ. ಒಂದೇ ಮದ್ದು ಎಂದರೆ ಹೊಡೆಯುವುದು, ಒದೆಯುವುದು. ಇದರಲ್ಲಿ ವ್ಯವಹರಿಸಲು ಬೇರೆ ದಾರಿ ಯಾವುದೂ ಇಲ್ಲ. ಮಾತುಗಳಿಂದ ಪ್ರಯೋಜನವಿಲ್ಲ. ಅವರನ್ನು ಬಡಿದು ಹಾಕಬೇಕು. ಜೈ ಶ್ರೀ ರಾಮ್” ಎಂದು ಮೋನು ಮನೇಸರ್ ಭಾಷಣ ಮಾಡಿದ್ದ.


ಗುರುಗಾಂವ್, ರೇವ್ರಿ, ನೂಹ್ ಸುತ್ತಮುತ್ತ ಈ ಮೋನು 50ರಷ್ಟು ಜನ ಗೋರಕ್ಷಕರೆನ್ನುವ ಹೊಡಿ ಬಡಿ ತಂಡವನ್ನು ಕಟ್ಟಿಕೊಂಡಿದ್ದಾನೆ. ದನಗಳ ರಕ್ಷಣೆಯ ಹೆಸರಿನಲ್ಲಿ ಶೂಟ್ ಮಾಡಲೂ ತಯಾರು ಗುಂಡೇಟು ತಿನ್ನಲೂ ತಯಾರು ಎಂದೂ ಆತನ ತಂಡದವರು ಹೇಳುತ್ತಾರೆ.
ಮೋನು ಮನೇಸರ್ ಸಾರ್ವಜನಿಕರಿಗೆ ಹಿಂಸೆಗೆ ಕರೆ ಕೊಡುವ ಕೆಲಸವನ್ನು ನಿರಂತರ ಮಾಡುತ್ತಲೇ ಇದ್ದಾನೆ. 2021ರ ನವೆಂಬರ್ ನಲ್ಲಿ ಗುರುಗ್ರಾಮದಲ್ಲಿ ಹಿಂದೂ ವಿರೋಧಿಗಳಿಗೆ ಗುಂಡು ಹಾರಿಸಿ ಎಂದು ಕೇಸರಿ ಪಡೆಯ ನಡುವೆ ಮೋನು ಭಾಷಣ ಮಾಡಿದ್ದ. ಮುಸ್ಲಿಮರು ಶುಕ್ರವಾರ ಸಾರ್ವಜನಿಕ ಸ್ಥಳದಲ್ಲಿ ನಮಾಝ್ ಮಾಡಿದರು ಎಂದು ಕೇಸರಿ ಪಡೆ ಪ್ರತಿಭಟನೆ ನಡೆಸುತ್ತಿತ್ತು. ಮೋನು ಮಾತಿಗೆ ಮಕ್ಕಳು ಕೂಡ ಹುಚ್ಚೆದ್ದು ಕುಣಿದಿದ್ದರು.


ಹರಿಯಾಣದ ನೂಹ್ ಪ್ರದೇಶದಲ್ಲಿ ವಾರಿಸ್ ಎಂಬ ವ್ಯಕ್ತಿಯ ಸಾವಿನ ಸಂಬಂಧ ಇತ್ತೀಚೆಗೆ ಮೋನು ಹೆಸರು ಮುಖ್ಯವಾಗಿ ಕೇಳಿಬಂದಿದೆ. ಜನವರಿ 28ರಂದು ದನ ಸಾಗಿಸಿದರು ಎಂದು ಆರೋಪಿಸಿ ವಾರಿಸ್, ನಫೀಸ್ ಮತ್ತು ಶೌಕೀನ್ ಅವರನ್ನು ಮೋನು ಮತ್ತಾತನ ಗುಂಪು ಅಟ್ಟಾಡಿಸಿದ್ದರ ಬಗ್ಗೆ ಸಾವಿಗೀಡಾದ ವಾರಿಸ್ ಮನೆಯವರು ಪೊಲೀಸರಿಗೆ ದೂರು ನೀಡಿದ್ದಾರೆ. ಮರುದಿನ ಬೆಳಗ್ಗಿನ 5 ಗಂಟೆಯ ಹೊತ್ತಿಗೆ ವಾರಿಸ್ ಮತ್ತಿಬ್ಬರು ಇದ್ದ ಕಾರು ಹರಿಯಾಣದ ತಾವ್ರು ಭೀವಂಡಿ ರಸ್ತೆಯಲ್ಲಿ ಟೆಂಪೋ ಒಂದಕ್ಕೆ ಗುದ್ದಿರುವುದು ಕಂಡು ಬಂದಿದೆ. ನಲ್ಹರ್ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ವಾರಿಸ್ ಸಾವಿಗೀಡಾದರೆ; ಇನ್ನಿಬ್ಬರು ಹಾಗೂ ಹೀಗೂ ಬದುಕುಳಿದರು.
ಈ ಬಗೆಗಿನ ಪೊಲೀಸ್ ವರದಿಯು ಹಲವಾರು ಲೋಪಗಳಿಂದ ಕೂಡಿದೆ. ಮೋನು ತಂಡವು ಆಮೇಲೆ ಡಿಲೀಟ್ ಮಾಡಿರುವ ಫೇಸ್ ಬುಕ್ ನಲ್ಲಿ ಲೈವ್ ಬಂದಂತೆ ಕಾರಿನಲ್ಲಿದ್ದ ವಾರಿಸ್ ಮತ್ತಿಬ್ಬರನ್ನು ಈ ಗುಂಪು ಊರು, ಹೆಸರು ಇತ್ಯಾದಿ ಕೇಳುತ್ತ ಹಲ್ಲೆ ನಡೆಸುತ್ತಿರುವುದು ಕಂಡು ಬಂದಿದೆ.


“ಆ ವೀಡಿಯೋದಲ್ಲಿ ಅವರು ಭಾರೀ ಗಾಯಕ್ಕೇನೂ ಒಳಗಾಗಿರಲಿಲ್ಲ. ಅವರ ಬೆದರಿಕೆಯ ಪ್ರಶ್ನೆಗಳಿಗೆ ಆತ ಸಹಜವಾಗಿಯೇ ಉತ್ತರಿಸಿದ್ದಾನೆ. ಆಮೇಲೆ ಆಂತರಿಕ ರಕ್ತಸ್ರಾವದಿಂದ ಸಾವಾಗಿದೆ ಎಂದು ವರದಿ ನೀಡಲಾಯಿತು. ಇದು ಹೇಗೆ ಸಾಧ್ಯ? ಎಂದು ಪ್ರಶ್ನಿಸುತ್ತಾರೆ ವಾರಿಸ್ ನ ಅಣ್ಣ ಇಮ್ರಾನ್.

Join Whatsapp
Exit mobile version