Home ಟಾಪ್ ಸುದ್ದಿಗಳು ಜಾಮೀಯ ಮಸೀದಿ ತೆರವುಗೊಳಿಸುವಂತೆ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ ಬಜರಂಗದಳ

ಜಾಮೀಯ ಮಸೀದಿ ತೆರವುಗೊಳಿಸುವಂತೆ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ ಬಜರಂಗದಳ

ಬೆಂಗಳೂರು: ಶ್ರೀರಂಗಪಟ್ಟಣದ ಜಾಮೀಯಾ ಮಸೀದಿ ತೆರವುಗೊಳಿಸುವಂತೆ ಆಗ್ರಹಿಸಿ ಬಜರಂಗದಳ ಹೈಕೋರ್ಟ್’ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದೆ. ಈ ಮಸೀದಿಯು ಒಂದು ಕಾಲದಲ್ಲಿ ದೇವಾಲಯವಾಗಿತ್ತು ಎಂಬುದಕ್ಕೆ ಪುರಾವೆಗಳಿವೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.

ಮಂಡ್ಯ ಜಿಲ್ಲೆಯ ಐತಿಹಾಸಿಕ ಶ್ರೀರಂಗಪಟ್ಟಣದ ಜಾಮೀಯಾ ಮಸೀದಿಯಲ್ಲಿ ಹಿಂದೂ ಧರ್ಮದ ದೇವರುಗಳು ಮತ್ತು ದೇವಾಲಯದ ರಚನೆಯ ಕುರುಹುಗಳಿವೆ. ಆದ್ದರಿಂದ ಈ ಮಸೀದಿಯನ್ನು ತಕ್ಷಣ ತೆರವುಗೊಳಿಸಬೇಕು ಮತ್ತು ಮಸೀದಿಯ ಆವರಣದಲ್ಲಿರುವ ಕಲ್ಯಾಣಿಯಲ್ಲಿ (ಸಾಂಪ್ರದಾಯಿಕ ಜಲಮೂಲ) ಹಿಂದೂ ಭಕ್ತರಿಗೆ ಸ್ನಾನ ಮಾಡಲು ಅವಕಾಶ ನೀಡಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ.

ಜ್ಞಾನವಾಪಿ ಮಸೀದಿ ಮಾದರಿಯಲ್ಲಿ ಶ್ರೀರಂಗಪಟ್ಟಣದ ಮಸೀದಿಯನ್ನೂ ಮರುಪರಿಶೀಲಿಸುವಂತೆ ಬಜರಂಗದಳದ ಕಾರ್ಯಕರ್ತರು ಒತ್ತಾಯಿಸಿದ್ದರು. ಈ ನಿಟ್ಟಿನಲ್ಲಿ ಬಜರಂಗದಳದ ರಾಜ್ಯಾಧ್ಯಕ್ಷ ಮಂಜುನಾಥ್, 108 ಭಕ್ತರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ.

ಮೈಸೂರು ಗೆಜೆಟರ್, ಮಸೀದಿಯಲ್ಲಿನ ಹಿಂದೂ ವಾಸ್ತುಶಿಲ್ಪ, ಹಿಂದೂ ವಿಗ್ರಹಗಳ ಶಾಸನ, ಜಲಮೂಲ ಮತ್ತು ಬ್ರಿಟಿಷ್ ಅಧಿಕಾರಿಗಳ ಉಲ್ಲೇಖಗಳನ್ನು ನ್ಯಾಯಾಲಯಕ್ಕೆ ಬಜರಂಗದಳದ ಕಾರ್ಯಕರ್ತರು ಪುರಾವೆಯಾಗಿ ನೀಡಿದ್ದಾರೆ.

ಈ ಹಿಂದೆ ಸಂಘಪರಿವಾರದ ಕಾರ್ಯಕರ್ತರು ಮಸೀದಿಯಲ್ಲಿ ಪ್ರಾರ್ಥನೆ ನಡೆಸಲು ಅಧಿಕಾರಿಗಳಲ್ಲಿ ಅನುಮತಿ ಕೋರಿದ್ದರು. ಈ ವಿಚಾರ ರಾಜ್ಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು.

ಈ ಮಧ್ಯೆ ಜಾಮೀಯಾ ಮಸೀದಿಯನ್ನು ಸಂಘಪರಿವಾರದ ಕಾರ್ಯಕರ್ತರಿಂದ ರಕ್ಷಿಸುವಂತೆ ಮಸೀದಿ ಆಡಳಿತ ಕಮಿಟಿಯವರು ಸಂಬಂಧಪಟ್ಟ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದ್ದರು.

ಸದ್ಯ ಜಾಮೀಯಾ ಮಸೀದಿಯನ್ನು ಮಸ್ಜಿದ್- ಇ- ಆಲಾ ಎಂದು ಕರೆಯಲಾಗುತ್ತಿದ್ದು, ಇದು ಶ್ರೀರಂಗಪಟ್ಟಣದ ಕೋಟೆಯೊಳಗೆ ಇದೆ. ಇದನ್ನು 1786-87 ರಲ್ಲಿ ಟಿಪ್ಪು ಆಳ್ವಿಕೆಯಲ್ಲಿ ನಿರ್ಮಿಸಲಾಯಿತು. ಮಸೀದಿಯು ಪ್ರವಾದಿ ಮುಹಮ್ಮದ್ ಅವರ ಒಂಬತ್ತು ಹೆಸರುಗಳನ್ನು ಉಲ್ಲೇಖಿಸುವ ಮೂರು ಶಾಸನಗಳನ್ನು ಹೊಂದಿದೆ ಎಂದು ಹೇಳಲಾಗಿದೆ.

ಸಂಘಪರಿವಾರದ ಅಂಗಸಂಸ್ಥೆಯಾದ ನರೇಂದ್ರ ಮೋದಿ ವಿಚಾರ ಮಂಚ್ ಎಂಬ ಸಂಘಟನೆಯು ಮಸೀದಿಯನ್ನು ಸಮೀಕ್ಷೆ ನಡೆಸುವಂತೆ ಅಧಿಕಾರಿಗಳಿಗೆ ಮನವಿ ಮಾಡಿತ್ತು. ಹನುಮಾನ್ ಮಂದಿರವನ್ನು ನೆಲಸಮಗೊಳಿಸಿದ ಬಳಿಕ ಜಾಮೀಯಾ ಮಸೀದಿಯನ್ನು ನಿರ್ಮಿಸಲಾಗಿದೆ ಎಂದು ಅದು ಹೇಳಿತ್ತು.

Join Whatsapp
Exit mobile version