Home ಟಾಪ್ ಸುದ್ದಿಗಳು ಸಮೀರ್ ಶಹಾಪೂರ್ ಹತ್ಯೆ ಪ್ರಕರಣ: ಕೇಸು ವಾಪಾಸ್ ಪಡೆಯಲು ಸಂತ್ರಸ್ತ ಕುಟುಂಬಕ್ಕೆ ಬಜರಂಗದಳ ಕಾರ್ಯಕರ್ತರಿಂದ ಬೆದರಿಕೆ

ಸಮೀರ್ ಶಹಾಪೂರ್ ಹತ್ಯೆ ಪ್ರಕರಣ: ಕೇಸು ವಾಪಾಸ್ ಪಡೆಯಲು ಸಂತ್ರಸ್ತ ಕುಟುಂಬಕ್ಕೆ ಬಜರಂಗದಳ ಕಾರ್ಯಕರ್ತರಿಂದ ಬೆದರಿಕೆ

ನರಗುಂದ: ಬಜರಂಗದಳದ ಕಾರ್ಯಕರ್ತರಿಂದ ಹತ್ಯೆಯಾದ ಸಮೀರ್ ಶಹಾಪುರ ಅವರ ತಂದೆಗೆ ಮತ್ತೆ ಬಜರಂಗ ದಳದ ಕಾರ್ಯಕರ್ತರು ಕೇಸ್ ವಾಪಸ್ ಪಡೆದುಕೊಳ್ಳುವಂತೆ ಜೀವಬೆದರಿಕೆ ಹಾಕಿದ ಘಟನೆ ನಡೆದಿದೆ. ಈ ಸಂಬಂಧ ಓರ್ವನ ವಿರುದ್ಧ ಎಫ್ ಐಆರ್ ದಾಖಲಾಗಿದೆ.


6 ತಿಂಗಳ ಹಿಂದೆ ಹೆತ್ತ ಮಗನನ್ನು ಕಳೆದುಕೊಂಡ ಸಂತ್ರಸ್ತ ಕುಟುಂಬ ಆರೋಪಿಗಳ ವಿರುದ್ಧ ಕಾನೂನು ಹೋರಾಟ ನಡೆಸುತ್ತಿದೆ. ಅದೇ ವಿಚಾರವನ್ನು ಇಟ್ಟುಕೊಂಡು ಸಂಘಪರಿವಾರದ ಕಾರ್ಯಕರ್ತರು ಬೆದರಿಕೆ ಹಾಕಿದ್ದಾರೆ.


ಸ್ವಾತಂತ್ರ್ಯೋತ್ಸವದ ಕಾರ್ಯಕ್ರಮ ಮುಗಿಸಿ ಮನೆಗೆ ಹೊರಟಿದ್ದ ಸಮೀರ್ ಶಹಾಪುರ ಅವರ ತಂದೆ ಸುಬಾನ್ ಸಾಬ್ ಅಬ್ದುಲ್ ಸಾಬ್ ಶಹಾಪೂರ ಅವರನ್ನು ಅಡ್ಡಗಟ್ಟಿದ ಬಜರಂಗದಳದ ಕಾರ್ಯಕರ್ತರು, ಕೇಸು ವಾಪಸ್ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ನಿಮ್ಮನ್ನೂ, ನಿಮ್ಮ ಇಬ್ಬರು ಮಕ್ಕಳನ್ನೂ ಜೀವಸಹಿತ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾರೆ.


ನರಗುಂದ ಪಟ್ಟಣದ ಬಸ್ ನಿಲ್ದಾಣದಲ್ಲಿ ಬಜರಂಗ ದಳದ ವಿರೂಪಾಕ್ಷ ಸಂಬಾಳದ ಎಂಬಾತ, ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿದ್ದಾನೆ. ಆಗ ಸ್ಥಳದಲ್ಲಿದ್ದ ಜನರು ಬಿಡಿಸಿದ್ದಾರೆ. ಆಗ ಸುಬಾನ್ ಸಾಬ್ ತಮ್ಮ ಇನ್ಬೊಬ್ಬ ಪುತ್ರನನ್ನು ಸ್ಥಳಕ್ಕೆ ಕರೆಸಿಕೊಂಡಿದ್ದಾರೆ. ಆಗಲೂ ವಿರೂಪಾಕ್ಷ ಅವಾಚ್ಯ ಶಬ್ದಗಳಿಂದ ನಿಂದಿಸಿ ನಿನ್ನ ಹಾಗೂ ನಿನ್ನ ಮಕ್ಕಳನ್ನು ಜೀವಸಹಿತ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ಸುಬಾನ್ ಸಾಬ್ ತಿಳಿಸಿದ್ದಾರೆ.
ಈ ಬಗ್ಗೆ ಮಧ್ಯಾಹ್ನವೇ ಸುಬಾನ್ ಸಾಬ್ ಅವರು ನರಗುಂದ ಪೊಲೀಸರಿಗೆ ದೂರು ನೀಡಿದ್ದಾರೆ. ಆದರೆ ಪೊಲೀಸರು ದೂರು ಸ್ವೀಕರಿಸಲು ಹಿಂದೇಟು ಹಾಕಿ ರಾಜಿ ಪಂಚಾಯಿತಿಯಲ್ಲಿ ಮುಗಿಸಿಕೊಳ್ಳಿ ಎಂದು ಸಾಗ ಹಾಕಲು ನೋಡಿದ್ದಾರೆ.
ರಾತ್ರಿಯವರೆಗೂ ದೂರು ಸ್ವೀಕರಿಸಲಿಲ್ಲ. ಕೊನೆಗೂ ಮೇಲಾಧಿಕಾರಿಗಳ ಗಮನಕ್ಕೆ ಬಂದ ಬಳಿಕ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ನಾಲ್ವರು ಹಲ್ಲೆ, ಜೀವ ಬೆದರಿಕೆ ಹಾಕಿದ್ದರೂ ಪೊಲೀಸರು ಮಾತ್ರ ಒಬ್ಬನ ಮೇಲೆ ಮಾತ್ರ ಕೇಸ್ ಮಾಡಿಕೊಂಡು ಇನ್ನೂ ಮೂರು ಜನರನ್ನು ಪ್ರಕರಣದಿಂದ ಕೈ ಬಿಟ್ಟಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಸಮೀರ್ ಶಹಾಪುರ ಅವರನ್ನು ಜನವರಿ ತಿಂಗಳಲ್ಲಿ ಬಜರಂಗ ದಳದ ಕಾರ್ಯಕರ್ತರು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದರು. ಈ ದೃಶ್ಯ ಸಿ ಸಿ ಕ್ಯಾಮರಾದಲ್ಲಿ ಸೆರೆಯಾಗಿ ಎಲ್ಲೆಡೆ ವೈರಲ್ ಆಗಿತ್ತು.

Join Whatsapp
Exit mobile version