ಶಿವಮೊಗ್ಗ: ಕ್ರೈಸ್ತರ ಪಾರ್ಥನಾ ಸಭೆಗೆ ನುಗ್ಗಿದ ಬಜರಂಗ ದಳದ ಕಾರ್ಯಕರ್ತರು ಬಲವಂತದ ಮತಾಂತರ ನಡೆಯುತ್ತಿದೆ ಎಂದು ಆರೋಪಿಸಿ ದಾಂಧಲೆವೆಬ್ಬಿಸಿದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.
ಶಿವಮೊಗ್ಗದ ಗೋಪಶೆಟ್ಟಿ ರಸ್ತೆಯ ಮನೆಯೊಂದರಲ್ಲಿ ಕಳೆದ 15 ವರ್ಷಗಳಿಂದ ಪ್ರಾರ್ಥನಾ ಸಭೆ ನಡೆಯುತ್ತಿದೆ. ಸ್ಥಳೀಯ ಮಹಿಳೆಯರು, ಪುರುಷರು ಇದರಲ್ಲಿ ಪಾಲ್ಗೊಳ್ಳುತ್ತಿದ್ದರು. ನಿನ್ನೆ ಕೂಡ ವಿಶೇಷ ಪ್ರಾರ್ಥನೆ ಆಯೋಜಿಸಲಾಗಿತ್ತು. ಪ್ರಾರ್ಥನೆ ನಡೆಯುತ್ತಿದ್ದಂತೆ ಏಕಾಏಕಿ ಬಜರಂಗದಳದ ಕಾರ್ಯಕರ್ತರು ಸ್ಥಳಕ್ಕೆ ಧಾವಿಸಿ ಘೋಷಣೆ ಕೂಗಿ ಪ್ರಾರ್ಥನೆ ಅಡ್ಡಿಪಡಿಸಿದ್ದಲ್ಲದೆ ಅಲ್ಲಿದ್ದ ಮಹಿಳೆಯೊಂದಿಗೆ ವಾಗ್ವಾದ ನಡೆಸಿದ್ದಾರೆ. ಈ ವೇಳೆ ಮಾತಿನ ಚಕಮಕಿ ನಡೆದಿದೆ.
ಇಲ್ಲಿ ಯಾವುದೇ ರೀತಿಯ ಮತಾಂತರ ನಡೆಯುತ್ತಿಲ್ಲ. ಕಳೆದ 15 ವರ್ಷಗಳಿಂದ ಇಲ್ಲಿ ಪ್ರಾರ್ಥನೆ ನಡೆಯುತ್ತಿದೆ. ಸ್ವ ಇಚ್ಛೆಯಿಂದ ಸ್ಥಳೀಯರು ಇಲ್ಲಿ ಬಂದು ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಪ್ರಾರ್ಥನೆಯಿಂದ ನೆಮ್ಮದಿ ಸಿಗುತ್ತದೆ ಎಂಬ ನಂಬಿಕೆ ಇರುವವರು ಇಲ್ಲಿಗೆ ಬರುತ್ತಾರೆ ಎಂದು ಪ್ರಾರ್ಥನೆಯ ನೇತೃತ್ವ ವಹಿಸಿದ್ದ ಪಾದ್ರಿ ಮಣಿಕಂಠ ಇಮ್ಯಾನ್ಯುಯೆಲ್ ತಿಳಿಸಿದ್ದಾರೆ.
ಪ್ರಾರ್ಥನೆಯಲ್ಲಿ ಪಾಲ್ಗೊಂಡ ಮಹಿಳೆಯರು ಕೂಡ ನಾವು ಸ್ವ ಇಚ್ಛೆಯಿಂದ ಇಲ್ಲಿಗೆ ಬಂದಿದ್ದೇವೆ, ನಾವು ಮತಾಂತರ ಆಗಿಲ್ಲ ಎಂದು ಬಜರಂಗದಳದ ಕಾರ್ಯಕರ್ತರೊಂದಿಗೆ ಹೇಳುತ್ತಿರುವ ವೀಡಿಯೋ ವೈರಲ್ ಆಗಿದೆ.
ಆದರೂ ಪೊಲೀಸರು ಮಣಿಕಂಠ ಹಾಗೂ ಇತರ ಕೆಲವು ಮಹಿಳೆಯರನ್ನು ಠಾಣೆಗೆ ಕರೆದೊಯ್ದು ಹೇಳಿಕೆ ಪಡೆದುಕೊಂಡಿದ್ದಾರೆ.
ಬಜರಂಗ ದಳದ ಗೂಂಡಾ ಪ್ರವೃತ್ತಿಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಪೊಲೀಸರ ನಡೆಯನ್ನು ಕೂಡ ಸಾರ್ವಜನಿಕರು ಖಂಡಿಸಿದ್ದಾರೆ.
ಅಂತಾರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಶುಕ್ರವಾರ ಶಿವಮೊಗ್ಗದ ಹೋಟೆಲ್ ಒಂದರಲ್ಲಿ ಏರ್ಪಡಿಸಿದ್ದ ಪಾರ್ಟಿಯೊಂದರ ಮೇಲೂ ಬಜರಂಗದಳದ ಕಾರ್ಯಕರ್ತರು ದಾಳಿ ನಡೆಸಿ ದಾಂಧಲೆವೆಬ್ಬಿಸಿದ್ದರು.