Home ಕರಾವಳಿ ಪರೀಕ್ಷೆ ಬರೆದು ತೆರಳುತ್ತಿದ್ದ ವಿದ್ಯಾರ್ಥಿಗೆ ಬಜರಂಗದಳ ಕಾರ್ಯಕರ್ತರಿಂದ ರಾಡ್ ನಿಂದ ಹಲ್ಲೆ: ಆಸ್ಪತ್ರೆಗೆ ದಾಖಲು

ಪರೀಕ್ಷೆ ಬರೆದು ತೆರಳುತ್ತಿದ್ದ ವಿದ್ಯಾರ್ಥಿಗೆ ಬಜರಂಗದಳ ಕಾರ್ಯಕರ್ತರಿಂದ ರಾಡ್ ನಿಂದ ಹಲ್ಲೆ: ಆಸ್ಪತ್ರೆಗೆ ದಾಖಲು

ಮಂಗಳೂರು; ನಗರದ ಪಿ.ಎ. ಕಾಲೇಜು ವಿದ್ಯಾರ್ಥಿಯೊಬ್ಬನಿಗೆ ಬಜರಂಗದಳ ಕಾರ್ಯಕರ್ತರು ಎನ್ನಲಾದ ತಂಡವೊಂದು ಮಾರಣಾಂತಿಕ ಹಲ್ಲೆ ನಡೆಸಿದ್ದು, ಗಾಯಗೊಂಡಿರುವ ವಿದ್ಯಾರ್ಥಿಯು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಾಗಿದ್ದಾರೆ.


ಉಡುಪಿಯ ನಿವಾಸಿ ಮನ್ಸೂರ್ (21) ಹಲ್ಲೆಗೊಳಗಾದ ವಿದ್ಯಾರ್ಥಿ. ನಗರದ ಪಿ.ಎ. ಕಾಲೇಜಿನಲ್ಲಿ ಡಿಪ್ಲೊಮಾ ಎರಡನೇ ವರ್ಷದಲ್ಲಿ ಕಲಿಯುತ್ತಿರುವ ಮನ್ಸೂರ್ ಇಂದು ಪರೀಕ್ಷೆ ಮುಗಿಸಿ ಮನೆಗೆ ತೆರಳಲು ಸ್ಟೇಟ್ ಬ್ಯಾಂಕ್ ಬಳಿಯ ಸರ್ವೀಸ್ ಬಸ್ ನಿಲ್ದಾಣಕ್ಕೆ ಬಂದಿದ್ದಾರೆ. ಈ ವೇಳೆ ಏಕಾಏಕಿ 15 ಮಂದಿ ಬಜರಂಗ ದಳದ ಕಾರ್ಯಕರ್ತರು ಅವರ ಮೇಲೆ ರಾಡ್ , ದೊಣ್ಣೆ ಹಾಗೂ ಕೈಯಿಂದ ಯದ್ವಾತದ್ವ ಹಲ್ಲೆ ನಡೆಸಿದ್ದಾರೆ. ಜನನಿಬಿಡ ಸ್ಟೇಟ್ ಬ್ಯಾಂಕ್ ಪ್ರದೇಶದಲ್ಲೇ ಈ ಘಟನೆ ನಡೆದಿದ್ದು, ಸಾರ್ವಜನಿಕರು ಗೂಂಡಾ ದಾಳಿಯಿಂದ ಬೆಚ್ಚಿ ಬಿದ್ದಿದ್ದಾರೆ.


ತಕ್ಷಣ ಸ್ಥಳೀಯರು ವಿದ್ಯಾರ್ಥಿಯನ್ನು ನಗರದ ವೆನ್ ಲಾಕ್ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಬಜರಂಗ ದಳದ ಶೈಲು, ಪವನ್ ನೇತೃತ್ವದಲ್ಲಿ 15 ಮಂದಿ ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಹಲ್ಲೆಗೊಳಗಾದ ವಿದ್ಯಾರ್ಥಿ ಪಾಂಡೇಶ್ವರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.


ಆಸ್ಪತ್ರೆಗೆ ನಿಯೋಗ ಭೇಟಿ
ವಿಷಯ ತಿಳಿಯುತ್ತಿದ್ದಂತೆ ಕ್ಯಾಂಪಸ್ ಫ್ರಂಟ್ ದ.ಕ ಜಿಲ್ಲಾಧ್ಯಕ್ಷ ಸಿರಾಜ್ ನೇತೃತ್ವದ ನಿಯೋಗ ಆಸ್ಪತ್ರೆಗೆ ಭೇಟಿ ವಿದ್ಯಾರ್ಥಿಯ ಆರೋಗ್ಯ ವಿಚಾರಿಸಿತು. ಬಳಿಕ ವೆನ್ ಲಾಕ್ ಆಸ್ಪತ್ರೆಯ ಮುಂಭಾಗ ಪ್ರತಿಭಟನೆ ನಡೆಸಿ ಆರೋಪಿಗಳನ್ನು ಶೀಘ್ರ ಬಂಧಿಸುವಂತೆ ಪೊಲೀಸರನ್ನು ಒತ್ತಾಯಿಸಿತು.

Join Whatsapp
Exit mobile version