ಬಜ್ಪೆ : ಮೂಡುಬಿದಿರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಜ್ಪೆ ಮತ್ತು ಮಳವೂರು ಗ್ರಾಮ ಪಂಚಾಯತ್ ವ್ಯಾಪ್ತಿಯನ್ನು ಒಟ್ಟುಗೂಡಿಸಿ ಬಜ್ಪೆ ಪಟ್ಟಣ ಪಂಚಾಯತ್ ಆಗಿ ಮೇಲ್ದರ್ಜೆಗೇರಿಸಲಾಗಿದೆ. ಇದೀಗ ಬಜ್ಪೆ ಪಟ್ಟಣ ಪಂಚಾಯತ್ ಅಧಿಕೃತವಾಗಿದ್ದು, ಘೋಷಣೆಯಾಗಿದ್ದು, ಮೂಡುಬಿದಿರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮತ್ತೊಂದು ಪಟ್ಟಣ ಪಂಚಾಯತಿ ರಚನೆಗೊಂಡಂತಾಗಿದೆ. ಈಗಾಗಲೇ ಮೂಲ್ಕಿ ಪಟ್ಟಣ ಪಂಚಾಯತಿ ಮತ್ತು ಮೂಡುಬಿದಿರೆ ಪುರಸಭೆ ಮೂಡುಬಿದಿರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಅಸ್ತಿತ್ವದಲ್ಲಿವೆ.
ಕೆಲ ಪುರಸಭೆ, ನಗರಸಭೆ ಮೇಲ್ದರ್ಜೆಗೆ : ನಾನಾ ಜಿಲ್ಲೆಗಳ ಗ್ರಾಮ ಪಂಚಾಯತಿ ಹಾಗೂ ಇತರ ಸ್ಥಳೀಯ ಸಂಸ್ಥೆಗಳನ್ನು ಮೇಲ್ದರ್ಜೆಗೆ ಏರಿಸಲು ತೀರ್ಮಾನಿಸಲಾಗಿದೆ. ಬೆಂಗಳೂರು ನಗರ ಜಿಲ್ಲೆಯ ಮಾದನಾಯಕನಹಳ್ಳಿ ಪುರಸಭೆಯನ್ನು ನಗರಸಭೆಯಾಗಿ ಪರಿವರ್ತಿಸಲಾಗುತ್ತಿದೆ. ಜೊತೆಗೆ ಮೈಸೂರಿನ ಹೂಟಗಳ್ಳಿ ಹಿನಕಲ್, ಕೂರ್ಗಳ್ಳಿ, ಬೆಳವಾಡಿ ಗ್ರಾಮ ಪಂಚಾಯತಿಗಳನ್ನು ಸೇರಿಸಿ ನಗರಸಭೆ ರಚಿಸಲಾಗುತ್ತಿದೆ.
ಪಟ್ಟಣ ಪಂಚಾಯತಿ : ಮೈಸೂರು ಜಿಲ್ಲೆಯ ಶ್ರೀರಾಂಪುರ, ಬೋಗಾದಿ, ಕಡಕೋಳ, ರಮ್ಮನಹಳ್ಳಿಗಳನ್ನು ಪಟ್ಟಣ ಪಂಚಾಯತಿ ಮಾಡಲಾಗಿದೆ, ಶಿಗ್ಗಾವಿ ಮತ್ತು ಸಿಂದಗಿ ಪುರಸಭೆಗಳ ವ್ಯಾಪ್ತಿ ಹೆಚ್ಚಿಸಲಾಗುತ್ತಿದೆ. ಶಿವಮೊಗ್ಗ ಜಿಲ್ಲೆಯ ಆನವಟ್ಟಿ, ರಾಮನಗರ ಜಿಲ್ಲೆಯ ಹಾರೋಹಳ್ಳಿ, ಹೊಳೆಹೊನ್ನೂರು, ದಕ್ಷಿಣ ಕನ್ನಡದ ಬಜ್ಪೆ ಪಂಚಾಯತಿಗಳನ್ನು ಪಟ್ಟಣ ಪಂಚಾಯತಿಯಾಗಿ ಮಾರ್ಪಾಟು ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ.