Home ಟಾಪ್ ಸುದ್ದಿಗಳು ರೈಲಿನಲ್ಲಿ ನಾಲ್ವರನ್ನು ಹತ್ಯೆ ಮಾಡಿದ್ದ ಮತಾಂಧ ಚೇತನ್‌ ಸಿಂಗ್‌ ಜಾಮೀನು ಅರ್ಜಿ ತಿರಸ್ಕೃತ

ರೈಲಿನಲ್ಲಿ ನಾಲ್ವರನ್ನು ಹತ್ಯೆ ಮಾಡಿದ್ದ ಮತಾಂಧ ಚೇತನ್‌ ಸಿಂಗ್‌ ಜಾಮೀನು ಅರ್ಜಿ ತಿರಸ್ಕೃತ

ಜೈಪುರ: ಚಲಿಸುತ್ತಿದ್ದ ರೈಲಿನಲ್ಲಿ ಮೂವರು ಮುಸ್ಲಿಂ ಪ್ರಯಾಣಿಕರು ಮತ್ತು ಹಿರಿಯ ಅಧಿಕಾರಿಯನ್ನು ಗುಂಡಿಟ್ಟು ಹತ್ಯೆ ಮಾಡಿದ್ದ ಆರೋಪಿ ಚೇತನ್‌ ಸಿಂಗ್‌ ಚೌಧರಿಯ ಜಾಮೀನು ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ. ಜಾಮೀನು ನೀಡಿದರೆ ಸಮಾಜಕ್ಕೆ ತಪ್ಪು ಸಂದೇಶ ರವಾನೆಯಾಗುತ್ತದೆ ಎಂಬ ಪ್ರತಿವಾದಿಗಳ ವಾದವನ್ನು ನ್ಯಾಯಾಲಯ ಪರಿಗಣಿಸಿದೆ.

ಮಹಾರಾಷ್ಟ್ರದ ಜೈಲಿನಲ್ಲಿರುವ ಚೌಧರಿ ವಿಚಾರಣೆಗೆ ನ್ಯಾಯಾಲಯಕ್ಕೆ ಹಾಜರಾಗಿದ್ದನು. ಕಳೆದ ತಿಂಗಳು ವಕೀಲರಾದ ಅಮಿತ್ ಮಿಶ್ರಾ ಮತ್ತು ಪಂಕಜ್ ಘಿಲ್ಡಿಯಾಲ್ ಅವರ ಮೂಲಕ ಜಾಮೀನು ಅರ್ಜಿಯನ್ನು ಸಲ್ಲಿಸಿದ್ದ ಆರೋಪಿ, ತಾನು ಭೂತ ಭ್ರಮೆಗಳಿಂದ ಬಳಲುತ್ತಿದ್ದೇನೆ, ನನ್ನನ್ನು ಇನ್ನೊಂದು ಆತ್ಮ ವಶಪಡಿಸಿಕೊಂಡಿರುವಂತೆ ಭಾಸವಾಗುತ್ತದೆ ಎಂದು ಹೇಳಿದ್ದನು.

ಪೊಲೀಸರು ಜಾಮೀನು ಅರ್ಜಿಗೆ ವಿರೋಧಿಸಿದ್ದು, ಆರೋಪಿ ನಿರ್ದಿಷ್ಟ ಸಮುದಾಯದ ಬಗ್ಗೆ ಕೋಪ ಮತ್ತು ದ್ವೇಷವನ್ನು ಹೊಂದಿದ್ದ ಮತ್ತು ಮಾಡಿದ ಅಪರಾಧಕ್ಕೆ ಯಾವುದೇ ಪಶ್ಚಾತ್ತಾಪವನ್ನು ಹೊಂದಿಲ್ಲ ಎಂದು ಹೇಳಿದ್ದಾರೆ.

ಆರೋಪಿಗೆ ಜಾಮೀನು ಮಂಜೂರು ಮಾಡಿದರೆ, ಅದು ಕಾನೂನಿನ ಬಗ್ಗೆ ನಕಾರಾತ್ಮಕ ಚಿತ್ರಣವನ್ನು ಸೃಷ್ಟಿಸುತ್ತದೆ ಮತ್ತು ಕೆಲವು ಧಾರ್ಮಿಕ ಗುಂಪುಗಳಲ್ಲಿ ಭಯ, ಭೀತಿ ಮತ್ತು ಅಭದ್ರತೆಯನ್ನು ಉಂಟುಮಾಡಬಹುದು ಎಂದು ಪ್ರಕರಣದ ತನಿಖೆ ನಡೆಸುತ್ತಿರುವ ಸರ್ಕಾರಿ ರೈಲ್ವೆ ಪೊಲೀಸರು ಕೋರ್ಟ್‌ ಗಮನಕ್ಕೆ ತಂದಿದ್ದರು.

ಅಲ್ಲದೆ ಕೊಲೆಯಾದ ಅಸ್ಗರ್ ಶೇಖ್ ಅವರ ಪತ್ನಿ ಉಮೇಸಾ ಖಾತೂನ್ ಅವರು ತಮ್ಮ ವಕೀಲರಾದ ಕರೀಂ ಪಠಾಣ್ ಮತ್ತು ಫಜ್ಲುರ್ರಹ್ಮಾನ್ ಶೇಖ್ ಅವರ ಮೂಲಕ ಚೌಧರಿಗೆ ಜಾಮೀನು ನೀಡುವುದನ್ನು ವಿರೋಧಿಸಿದ್ದಾರೆ. ಆರೋಪಿಯು ಭಯೋತ್ಪಾದಕ ಮನೋಭಾವದ ವ್ಯಕ್ತಿಯಾಗಿದ್ದಾನೆ ಮತ್ತು ರಾಷ್ಟ್ರೀಯ ಭದ್ರತೆಗೆ ಬೆದರಿಕೆಯಾಗಿದ್ದಾನೆ ಎಂದು ಕೋರ್ಟ್‌ ಗಮನಕ್ಕೆ ತಂದಿದ್ದಾರೆ.

ಜು.31ರಂದು ಮಹಾರಾಷ್ಟ್ರದ ಪಾಲ್ಘರ್ ರೈಲು ನಿಲ್ದಾಣದ ಬಳಿ ರೈಲಿನಲ್ಲಿ ಸಹಾಯಕ ಸಬ್ ಇನ್ಸ್‌ಪೆಕ್ಟರ್ ಟಿಕಾರಾಂ ಮೀನಾ ಮತ್ತು ಮೂವರು ಪ್ರಯಾಣಿಕರಾದ ಅಬ್ದುಲ್ ಖಾದರ್ ಮೊಹಮ್ಮದ್ ಹುಸೇನ್ ಭಾನ್‌ಪುರವಾಲಾ, ಸೈಯದ್ ಸೈಫುದ್ದೀನ್ ಮತ್ತು ಅಸ್ಗರ್ ಅಬ್ಬಾಸ್ ಶೇಖ್ ಅವರನ್ನು ಆರ್‌ಪಿಎಫ್ ಪೇದೆಯಾಗಿದ್ದ ಚೇತನ್‌ ಸಿಂಗ್‌ ಗುಂಡಿಟ್ಟು ಹತ್ಯೆ ಮಾಡಿದ್ದನು. ಚೇತನ್ ಸಿಂಗ್, ಮುಸ್ಲಿಮರು ಪಾಕಿಸ್ತಾನ ಪರ ಕಾರ್ಯಾಚರಿಸುತ್ತಿದ್ದಾರೆ. ಇದನ್ನು ಮಾದ್ಯಮಗಳು ತೋರಿಸುತ್ತಿವೆ. ನೀವು ಭಾರತದಲ್ಲಿ ಬದುಕಲು ಬಯಸುವುದಾದರೆ ಮೋದಿ, ಯೋಗಿ ಹಾಗೂ ನಿಮ್ಮ ಠಾಕ್ರೆಗೆ ಮತ ಚಲಾಯಿಸಿ ಎಂದು ಹೇಳಿರುವುದು ಸಹ ಪ್ರಯಾಣಿಕರು ಚಿತ್ರೀಕರಿಸಿದ್ದ ವೀಡಿಯೊದಲ್ಲಿ ದಾಖಲಾಗಿದೆ.

Join Whatsapp
Exit mobile version