Home ಕರಾವಳಿ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷರ ಆರೋಪಗಳು ನಿರಾಧಾರ : ಬೈಕಂಪಾಡಿ ಮಸೀದಿ ಆಡಳಿತ ಸಮಿತಿ...

ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷರ ಆರೋಪಗಳು ನಿರಾಧಾರ : ಬೈಕಂಪಾಡಿ ಮಸೀದಿ ಆಡಳಿತ ಸಮಿತಿ ಸ್ಪಷ್ಟನೆ

►ಮಸೀದಿ ಕಮಿಟಿಯ ವಿರುದ್ಧ ಅವ್ಯವಹಾರದ ಆರೋಪ ಹೊರಿಸಿದ್ದ ಎನ್ ಬಿ ಅಬೂಬಕ್ಕರ್ !
►ಅಬೂಬಕ್ಕರ್ ಅವರ ಮನೆ ಜಪ್ತಿಗೆ ಆದೇಶ ನೀಡಿದ್ದ ಜಿಲ್ಲಾಡಳಿತ !

ಬೈಕಂಪಾಡಿ : ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಎನ್.ಬಿ. ಅಬೂಬಕ್ಕರ್ ಅವರು ಬೈಕಂಪಾಡಿ ಮೊಹಿಯುದ್ದೀನ್ ಜುಮ್ಮಾ ಮಸೀದಿಯ ಆಡಳಿತ ಸಮಿತಿಯ ವಿರುದ್ಧ ಮಾಡಿರುವ ಆರೋಪಗಳು ನಿರಾಧಾರ ಎಂದು ಮಸೀದಿ ಅಧ್ಯಕ್ಷ ಅಬ್ದುಲ್ ನಾಸೀರ್ ಲಕ್ಕಿ ಸ್ಟಾರ್ ಹೇಳಿದ್ದಾರೆ. ಮಂಗಳೂರಿನ ಸುರತ್ಕಲ್ ನಲ್ಲಿ ಖಾಸಗಿ ಹೊಟೇಲ್ ನಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಬೈಕಂಪಾಡಿ ಮಸೀದಿ ರಾಜ್ಯ ವಕ್ಫ್ ಮಂಡಳಿಯಿಂದ ಅನುಮೋದಿತವಾಗಿದೆ. ಪ್ರತಿ ವರ್ಷ ಮಸೀದಿಯಲ್ಲಿ ಮಹಾಸಭೆ ನಡೆಯುತ್ತಾ ಬಂದಿದೆ ಮತ್ತು ಪ್ರತಿ 3 ವರ್ಷಕ್ಕೊಮ್ಮೆ ವಕ್ಫ್ ಬೈಲಾದ ನಿಯಮದ ಪ್ರಕಾರ ಹೊಸ ಚುನಾವಣೆ ನಡೆಸುತ್ತಾ ಬರಲಾಗಿದೆ. ಪ್ರಸಕ್ತ ಸಾಲಿನ ಮಹಾಸಭೆಯು ಎಪ್ರಿಲ್ 2 ರಂದು ನಿಗದಿಯಾಗಿದ್ದು, ನಿಗದಿತ ಕೋರಂ ಇಲ್ಲದ ಕಾರಣ  ಎಪ್ರಿಲ್ 9ಕ್ಕೆ ಮುಂದೂಡಲ್ಪಟ್ಟಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಇನ್ನು ಮಸೀದಿಯ ಎಲ್ಲಾ ಲೆಕ್ಕಪತ್ರಗಳು, ವ್ಯವಹಾರ ನಿರ್ವಹಣೆಗಳು ನಿಯಮಾನುಸಾರ ನಡೆಯುತ್ತಿದ್ದು, ಲೆಕ್ಕಪರಿಶೋಧಕರಿಂದ ಆಡಿಟ್ ಆಗಿ ವಕ್ಫ್ ಮಂಡಳಿಗೆ ನಿಯಮಿತವಾಗಿ ಮಾಹಿತಿ ನೀಡಲಾಗಿದೆ ಎಂದು ಸ್ಪಷ್ಟನೆ ನೀಡಿದರು. ಕರ್ನಾಟಕ ರಾಜ್ಯ ವಕ್ಫ್ ಮಂಡಳಿಗೆ ಕಾಲ ಕಾಲಕ್ಕೆ ಪಾವತಿಸಬೇಕಾದ ಶುಲ್ಕವನ್ನು ನಿಗದಿತವಾಗಿ ಪಾವತಿಸಲಾಗಿದ್ದು, ವಕ್ಫ್ ಇಲಾಖೆಯಿಂದ ಸ್ವೀಕೃತಿ ಸಿಕ್ಕಿದೆ.  ವರ್ಷಂಪ್ರತಿ ನಡೆಯುವ ಮಹಾಸಭೆಗೆ ಮುಂಚಿತವಾಗಿ ವಕ್ಫ್ ಮಂಡಳಿಗೆ ಮಾಹಿತಿ ನೀಡಲಾಗಿದೆ.

ಮಸೀದಿ ಕಮಿಟಿ ಇಂದು ಪತ್ರಿಕಾಗೋಷ್ಠಿ ಕರೆದಿದ್ದೇಕೆ ?

ಎನ್ ಬಿ ಅಬೂಬಕ್ಕರ್ ಅವರು ಇತ್ತೀಚೆಗೆ ಪತ್ರಿಕಾಗೋಷ್ಠಿ ಕರೆದು ಮಸೀದಿ ಆಡಳಿತ ಸಮಿತಿಯ ವಿರುದ್ಧ ಅವ್ಯವಹಾರದ ಆರೋಪ ಹೊರಿಸಿದ್ದರು. ಆದರೆ ವಾಸ್ತವದಲ್ಲಿ ಎನ್ ಬಿ ಅಬೂಬಕ್ಕರ್ ಅವರು ರಾಜ್ಯ ಅಲ್ಪ ಸಂಖ್ಯಾತ ನಿಗಮದ ಅಧ್ಯಕ್ಷರಾಗಿದ್ದ ವೇಳೆ ಬೈಕಂಪಾಡಿ ಮಸೀದಿಯ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದರು. ಇದರ ಅಧೀನದಲ್ಲಿ ಬರುವ ಅಡ್ಕ ಸಮುದಾಯ ಭವನದ ನಿರ್ಮಾಣ ಕಾಮಗಾರಿ ಈ ವೇಳೆ ನಡೆದಿತ್ತು. ಇದರಲ್ಲಿ ಅವ್ಯವಹಾರ ನಡೆದಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಸಿಎಜಿ  ಲೆಕ್ಕಪರಿಶೋಧನೆ ನಡೆಸಿತ್ತು. ಇದರಲ್ಲಿ ಸುಮಾರು 48 ಲಕ್ಷ ರೂಪಾಯಿಗಳ ಭಷ್ಟಾಚಾರ ನಡೆಸಿರುವುದು ಮೇಲ್ನೋಟಕ್ಕೆ ಬಹಿರಂಗಗೊಂಡಿತ್ತು. ಸಿಎಜಿ ವರದಿಯ ಆಧಾರದಲ್ಲಿ ವಕ್ಫ್ ಇಲಾಖೆ ಆ ಮೊತ್ತವನ್ನು ಪಾವತಿಸುವಂತೆ ಅಬೂಬಕ್ಕರ್ ಗೆ ಸೂಚಿಸಿತ್ತು.

ಇದರ ವಿರುದ್ಧ ಹೈಕೋರ್ಟ್ ಮೊರೆ ಹೋಗಿದ್ದ ಅಬೂಬಕ್ಕರ್ ಗೆ ನ್ಯಾಯಾಲಯವು ತಡೆಯಾಜ್ಞೆ ನೀಡಬೇಕೆಂದರೆ ಪಾವತಿಸಬೇಕಾಗಿದ್ದ ಮೊತ್ತದ ಶೇಕಡಾ 50ರಷ್ಟು ಮೊತ್ತವನ್ನು ನ್ಯಾಯಾಲಯದಲ್ಲಿ ಠೇವಣಿ ಇಡಲು ಸೂಚಿಸಿತ್ತು. ಆದರೆ ಇದರಲ್ಲಿ ವಿಫಲರಾದ ಅಬೂಬಕ್ಕರ್ ರಿಂದ ಹಣ ವಸೂಲಾತಿಗೆ ಕ್ರಮ ಮುಂದುವರಿಸುವಂತೆ ಕೋರ್ಟ್ ವಕ್ಫ್ ಇಲಾಖೆಗೆ ನಿರ್ದೇಶನ ನೀಡಿತ್ತು. ಅದರಂತೆ ವಕ್ಫ್ ಮಂಡಳಿಯು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳಿಗೆ ಸದರಿ ಮೊತ್ತವನ್ನು ವಸೂಲು ಮಾಡಲು ಕ್ರಮ ಕೈಗೊಳ್ಳುವಂತೆ ಸೂಚಿಸಿತ್ತು.  ಜಿಲ್ಲಾಧಿಕಾರಿಗಳು ಹಣ ಪಾವತಿಸಲು ಅಬೂಬಕ್ಕರ್ ನೋಟಿಸು ನೀಡಿತ್ತು. ಮೊತ್ತವನ್ನು ಪಾವತಿಸಲು ಎನ್ ಬಿ ಅಬೂಬಕ್ಕರ್ ವಿಫಲರಾದ ಹಿನ್ನೆಲೆಯಲ್ಲಿ ಭೂಕಂದಾಯ ಇಲಾಖೆಯ ನಿಯಮಾವಳಿಗಳಂತೆ ಅವರ ಮನೆಯನ್ನು ಜಪ್ತಿ ಮಾಡಿ, ಅದನ್ನು ಏಲಂ ಮಾಡಿ ಮೊತ್ತವನ್ನು ಸರ್ಕಾರಕ್ಕೆ ಜಮೆ ಮಾಡಲು ಕ್ರಮಕ ಕೈಗೊಂಡಿದೆ ಎನ್ನಲಾಗಿದೆ. ಅಬೂಬಕ್ಕರ್ ಅವರ ಪತ್ರಿಕಾಗೋಷ್ಠಿಯ ಕುರಿತಂತೆ ಪ್ರತಿಕ್ರಿಯಿಸಲು ಮಸೀದಿ ಆಡಳಿತ ಸಮಿತಿಯು ಇಂದು ಪತ್ರಿಕಾಗೋಷ್ಠಿ ಕರೆದಿತ್ತು.

ಇಂದಿನ ಪತ್ರಿಕಾಗೋಷ್ಟಿಯಲ್ಲಿ ಈ ಕುರಿತು ಸ್ಪಷ್ಟೀಕರಣ ನೀಡಿದ ಅಧ್ಯಕ್ಷರಾಗಿರುವ ನಾಸೀರ್ ಅವರು, ಮಸೀದಿ ಆಡಳಿತ ಸಮಿತಿ ಅಸ್ತಿತ್ವಕ್ಕೆ ಬರುವಾಗ ನಮ್ಮ ಸಂಸ್ಥೆಯ ಅಧೀನದಲ್ಲಿರುವ ಅಣ್ಣಾ ಸಮುದಾಯ ಭವನದ ವಕ್ಫ್ ಪರಿಷತ್‌ನ ಸಾಲದ ಮೊತ್ತ 50 ಲಕ್ಷ ಹಾಗೂ ಶೇಕಡಾ 5% ರಷ್ಟು ಸೇವಾ ಶುಲ್ಕ ಪಾವತಿಸಲು ಬಾಕಿ ಇದ್ದು, ಈ ಸಾಲ ಮೊತ್ತವನ್ನು ನಮ್ಮ ಸಮಿತಿಯು ಸಂಪೂರ್ಣವಾಗಿ ತೀರಿಸಿ ಸಂಸ್ಥೆಯನ್ನು ಸಾಲದಿಂದ ಮುಕ್ತಗೊಳಿಸಲಾಗಿದೆ ಎಂದು ಹೇಳಿದರು. ಇನ್ನು ನಮ್ಮ ಸಂಸ್ಥೆಯ ಮಹಾಸಭೆಯನ್ನು ನಿಗದಿತವಾಗಿ ನಡೆಸಲು ವಕ್ಫ್ ಮಂಡಳಿಗೆ ಅನುಮೋದನೆ ಕೋರಲಾಗಿದ್ದು, ನಿಯಮಾನುಸಾರ ಪರಿಶೀಲಿಸಿ ಮಹಾಸಭೆ ನಡೆಸಲು ಅನುಮತಿ ನೀಡಿರುತ್ತದೆ. ಜಮಾತಿನ ಸದಸ್ಯರೆಲ್ಲರಿಗೂ ಈ ಮಹಾಸಭೆ ಮುಕ್ತವಾಗಿದ್ದು, ಯಾವುದೇ ಚರ್ಚೆ ಸಂವಾದಕ್ಕೆ ಈ ಮಹಾಸಭೆಗೆ ಆಗಮಿಸಬಹುದು ಎಂದು ಹೇಳಿದರು. ಸುದ್ದಿಗೋಷ್ಟಿಯಲ್ಲಿ ನ್ಯಾಯವಾದಿ ಬಿ.ಮುಕ್ತಾರ್ ಅಹ್ಮದ್, ಉಪಾಧ್ಯಕ್ಷ ಚೈಬಾವ, ಕಾರ್ಯದರ್ಶಿ ಸೈದುದ್ದೀನ್, ಜೊತೆ ಕಾರ್ಯದರ್ಶಿ ಹಸನ್ ಶಮೀರ್, ಕೋಶಾಧಿಕಾರಿ ಉಮ್ಮರ್ ಫಾರೂಕ್, ಸದಸ್ಯರಾದ ಯಹ್ಯಾ, ಶರೀಫ್ ಚೈಯ್ಯ, ರಫೀಕ್ ಮೋನಾಕ, ಇಲಿಯಾಸ್ ಉಪಸ್ಥಿತರಿದ್ದರು.

Join Whatsapp
Exit mobile version