Home ಕರಾವಳಿ ಅನೈತಿಕ ಪೊಲೀಸ್ ಗಿರಿಯಿಂದ ದ.ಕ.ಜಿಲ್ಲೆಗೆ ಕೆಟ್ಟ ಹೆಸರು: ಲುಕ್ಮಾನ್ ಬಂಟ್ವಾಳ

ಅನೈತಿಕ ಪೊಲೀಸ್ ಗಿರಿಯಿಂದ ದ.ಕ.ಜಿಲ್ಲೆಗೆ ಕೆಟ್ಟ ಹೆಸರು: ಲುಕ್ಮಾನ್ ಬಂಟ್ವಾಳ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯು ವಿದ್ಯಾರ್ಥಿಗಳ, ಪ್ರವಾಸಿಗರ, ಧಾರ್ಮಿಕ ಯಾತ್ರಿಗಳ ನೆಲೆಯಾಗಿದ್ದು, ಇಲ್ಲಿ ನಡೆಯುತ್ತಿರುವ ಅನೈತಿಕ ಪೋಲೀಸ್ ಗಿರಿಯಿಂದಾಗಿ ಜಿಲ್ಲೆಗೆ ಕೆಟ್ಟ ಹೆಸರು ಬರುತ್ತಿದೆ ಎಂದು ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಲುಕ್ಮಾನ್ ಬಂಟ್ವಾಳ ಹೇಳಿದ್ದಾರೆ.


ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ವರ್ಷ ಅನೈತಿಕ ಪೋಲೀಸ್ ಗಿರಿಯ 12 ಪ್ರಕರಣಗಳು ನಡೆದಿವೆ. ಇದು ಕೂಡ ಚುನಾವಣಾ ತಂತ್ರವಾಗಿದ್ದು, ಜಿಲ್ಲೆಗೆ ಇದರಿಂದ ತುಂಬಾ ನಷ್ಟವಾಗಿದೆ. ಧಾರ್ಮಿಕ ವಿಭಜನೆ ಮೂಲಕ ಮತ ಗಳಿಸಲು ನೋಡುವ ಇವರು ಇತರೆಲ್ಲ ಸಮಸ್ಯೆಗಳನ್ನು ಮರೆಮಾಚಲು ಇಂತಹ ಕೃತ್ಯಗಳನ್ನು ನಡೆಸುತ್ತಿದ್ದಾರೆ ಎಂದು ಲುಕ್ಮಾನ್ ಬಂಟ್ವಾಳ ಹೇಳಿದರು.
ಈ ಅನೈತಿಕ ಪೋಲೀಸ್ ಗಿರಿ ಯಿಂದಾಗಿ ಜಿಲ್ಲೆಗೆ ಹೊಸ ಉದ್ಯಮ ಬರುತ್ತಿಲ್ಲ. ಪ್ರವಾಸಿಗರು ಮತ್ತು ಯಾತ್ರಿಗಳು ಕೂಡ ಕಡಿಮೆ ಆಗುತ್ತಿದ್ದಾರೆ. ಇದರಿಂದಾಗಿ ಜಿಲ್ಲೆಯ ಯುವಕರು ಸಾಕಷ್ಟು ಉದ್ಯೋಗಾವಕಾಶಗಳನ್ನು ಕಳೆದುಕೊಂಡಿದ್ದಾರೆ. ಈ ದ್ವೇಷದ ರಾಜಕೀಯದಿಂದ ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು ತೊಂದರೆಗೆ ಸಿಲುಕಿದ್ದಾರೆ. ಪೊಲೀಸರು ಒತ್ತಡಕ್ಕೆ ಮಣಿಯದೆ ಅನೈತಿಕ ಪೋಲೀಸ್ ಗಿರಿ ನಡೆಸುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಅವರು ಒತ್ತಾಯಿಸಿದರು.

ಅನೈತಿಕ ಪೋಲೀಸ್ ಗಿರಿ ವಿರುದ್ಧ ಯುವ ಕಾಂಗ್ರೆಸ್ ನಿರಂತರ ಹೋರಾಟ ಮಾಡುತ್ತದೆ. ತೊಂದರೆಗೆ ಸಿಲುಕುವ ಯಾರು ಬೇಕಾದರೂ ನಮ್ಮನ್ನು ಸಂಪರ್ಕಿಸಿದರೆ ಅವರ ಬೆಂಬಲಕ್ಕೆ ನಾವು ನಿಲ್ಲುತ್ತೇವೆ. ಸರ್ವೋದಯ ಸಂಕಲ್ಪ ಕ್ಯಾಂಪ್ ಮೂಲಕ ಈ ಬಗೆಗೆ ಯುವಕರಿಗೆ ತರಬೇತಿ ನೀಡುತ್ತೇವೆ. ಆ ಮೂಲಕ ಶಾಂತಿ ಬಯಸುವ 90% ಜನರನ್ನು ನೆಮ್ಮದಿ ಯಲ್ಲಿರಿಸಲು ಯೂತ್ ಕಾಂಗ್ರೆಸ್ ಶ್ರಮಿಸುತ್ತದೆ ಎಂದು ಅವರು ಹೇಳಿದರು.ಪತ್ರಿಕಾಗೋಷ್ಠಿಯಲ್ಲಿ ಸರ್ಫಾಝ್ ನವಾಜ್, ಸೌಮ್ಯಲತಾ, ರಮಾನಂದ ಪೂಜಾರಿ, ನವೀದ್ ಮೊದಲಾದವರು ಉಪಸ್ಥಿತರಿದ್ದರು.

Join Whatsapp
Exit mobile version