ಬೆಂಗಳೂರು: ಜಮೀನು ವಿವಾದದ ಹಿನ್ನೆಲೆಯಲ್ಲಿ ಪತಿ ಪತ್ನಿ ಇಬ್ಬರು ಒಂದೇ ಸೀರೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಸೂಲಿಕುಂಟೆಯಲ್ಲಿ ನಡೆದಿದೆ.
ಸೂಲಿಕುಂಟೆಯ ಚಂದ್ರಶೇಖರ್(32) ಹಾಗೂ ಶಶಿಕಲಾ(25) ಮೃತರು. ಮನೆಯಲ್ಲಿನ ಮೇಲ್ಛಾವಣಿಯ ಸಿಮೆಂಟ್ ಶೀಟ್ ಕೆಳಗೆ ಅಡ್ಡಲಾಗಿ ಹಾಕಿರುವ ಕಬ್ಬಿಣದ ಪೈಪ್ ಗೆ ಒಂದೇ ಸೀರೆಯನ್ನು ನೇತು ಹಾಕಿ ಸೀರೆಯ ಎರಡು ಕಡೆ ಒಬ್ಬೊಬ್ಬರು ಕುತ್ತಿಗೆಗೆ ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಸಂಬಂಧಿಕರಾದ ಕುಂಟನಾರಾಯಣಪ್ಪ 10 ಗುಂಟೆ ಜಮೀನನ್ನು ಮೃತ ಚಂದ್ರಶೇಖರ್ ತಾಯಿ ಜಯಮ್ಮಗೆ ಮಾರಾಟ ಮಾಡಿದ್ದರು. ಆದರೆ ಅದೇ ಜಮೀನನ್ನು ಕುಂಟ ನಾರಾಯಣಪ್ಪ ಹನುಮಂತಪ್ಪ ಎಂಬವರಿಗೆ ನೋಂದಣಿ ಮಾಡಿದ್ದಾರೆ. ಇದರಿಂದ ಕೋರ್ಟ್ ಕಚೇರಿ ಅಂತ ಅಲೆದಾಡಿದ್ದ ಚಂದ್ರಶೇಖರ್ ಮನನೊಂದು ನಿನ್ನೆ ಪತ್ನಿ ಜೊತೆಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಇಂದು ಗ್ರಾಮದಲ್ಲಿ ಇದೇ ಜಮೀನು ವಿಚಾರವಾಗಿ ನ್ಯಾಯ ಪಂಚಾಯತಿಗೂ ನಿರ್ಧಾರ ಮಾಡಲಾಗುತ್ತಿತ್ತು. ಆದರೆ ನ್ಯಾಯ ಪಂಚಾಯತಿಗೂ ಮುನ್ನವೇ ದಂಪತಿ ನೇಣಿಗೆ ಶರಣಾಗಿದ್ದಾರೆ. ಮದುವೆಯಾಗಿ 4 ವರ್ಷ ಕಳೆದಿದ್ದು, ಇನ್ನೂ ಮಕ್ಕಳಾಗದಿದ್ದರೂ ಗಂಡ ಹೆಂಡತಿ ಅನ್ಯೋನ್ಯವಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.