Home ಕ್ರೀಡೆ ಪಾಕಿಸ್ತಾನ- ಆಸ್ಟ್ರೇಲಿಯಾ ಟೆಸ್ಟ್ ರೋಚಕ ಡ್ರಾದಲ್ಲಿ ಅಂತ್ಯ: ಬ್ರಾಡ್ಮನ್ ದಾಖಲೆ ಮುರಿದ ಬಾಬರ್ !

ಪಾಕಿಸ್ತಾನ- ಆಸ್ಟ್ರೇಲಿಯಾ ಟೆಸ್ಟ್ ರೋಚಕ ಡ್ರಾದಲ್ಲಿ ಅಂತ್ಯ: ಬ್ರಾಡ್ಮನ್ ದಾಖಲೆ ಮುರಿದ ಬಾಬರ್ !

ಕರಾಚಿ: ತೀವ್ರ ಕುತೂಹಲ ಕೆರಳಿಸಿದ್ದ ಪಾಕಿಸ್ತಾನ-ಆಸ್ಟ್ರೇಲಿಯಾ ನಡುವಿನ 2ನೇ ಟೆಸ್ಟ್ ಪಂದ್ಯವು ರೋಚಕ ಡ್ರಾದಲ್ಲಿ ಅಂತ್ಯಗೊಂಡಿದೆ.
ಐದನೇ ಹಾಗೂ ಅಂತಿಮ ದಿನದಲ್ಲಿ ಪಾಕಿಸ್ತಾನದ ಗೆಲುವಿಗೆ 314 ರನ್’ಗಳ ಅಗತ್ಯವಿತ್ತು. 2 ವಿಕೆಟ್ ನಷ್ಟದಲ್ಲಿ 192 ರನ್’ಗಳಿಂದ ಅಂತಿಮ ದಿನದಾಟ ಆರಂಭಿಸಿದ್ದ ಪಾಕಿಸ್ತಾನಕ್ಕೆ ಪಂದ್ಯ ಉಳಿಸಿಕೊಳ್ಳುವುದು ಕಠಿಣ ಸವಾಲಾಗಿತ್ತು. ಆದರೆ ನಾಯಕ ಬಾಬರ್ ಅಝಮ್ ವಿಶ್ವ ದಾಖಲೆಯ 196 ರನ್ ಹಾಗೂ ಆರಂಭಿಕ ಅಬ್ದುಲ್ ಶಫೀಕ್ 96 ಹಾಗೂ ವಿಕೆಟ್ ಕೀಪರ್ ಮುಹಮ್ಮದ್ ರಿಝ್ವಾನ್ ಗಳಿಸಿದ ಆಕರ್ಷಕ ಶತಕದ ನೆರವಿನಿಂದ ಪಂದ್ಯ ಡ್ರಾದಲ್ಲಿ ಕೊನೆಗೊಂಡಿತು.
ಬಾಬರ್ ಅಝಮ್ 4 ರನ್’ಗಳಿಂದ ದ್ವಿಶತಕ ವಂಚಿತರಾದರೆ ಶಫೀಕ್ 4 ರನ್’ಗಳಿಂದ ಶತಕ ವಂಚಿತರಾದರು.
506 ರನ್ ಗೆಲುವಿನ ಗುರಿ ಪಡೆದಿದ್ದ ಅತಿಥೇಯ ಪಾಕಿಸ್ತಾನ, ಅಂತಿಮವಾಗಿ 7 ವಿಕೆಟ್ ನಷ್ಟದಲ್ಲಿ 443 ರನ್’ಗಳಿಸಿ ಪಂದ್ಯವನ್ನು ಉಳಿಸಿಕೊಳ್ಳುವಲ್ಲಿ ಸಫಲವಾಯಿತು.

ಬಾಬರ್ ಅಝಮ್ ವಿಶ್ವದಾಖಲೆ !

4 ರನ್’ಗಳಿಂದ ದ್ವಿಶತಕ ವಂಚಿತರಾದ ಬಾಬರ್ ಅಝಮ್, ಟೆಸ್ಟ್ ಪಂದ್ಯವೊಂದರ ನಾಲ್ಕನೇ ಇನ್ನಿಂಗ್ಸ್‌’ನಲ್ಲಿ ಅತಿಹೆಚ್ಚು ರನ್’ಗಳಿಸಿದ ಟೀಮ್ ಕ್ಯಾಪ್ಟನ್ ಎಂಬ ದಾಖಲೆಯನ್ನು ತನ್ನದಾಗಿಸಿಕೊಂಡರು‌.
ಈ ಹಾದಿಯಲ್ಲಿ ಬಾಬರ್ ಕ್ರಿಕೆಟ್ ದಂತಕಥೆ ಡಾನ್ ಬ್ರಾಡ್ಮನ್, ಬ್ರ್ಯಾನ್ ಲಾರಾ, ಮೈಕೆಲ್ ಅಥರ್ಟನ್, ರಿಕಿ ಪಾಂಟಿಂಗ್ ಹಾಗೂ ವಿರಾಟ್ ಕೊಹ್ಲಿಯನ್ನು ಹಿಂದಿಕ್ಕಿದ್ದಾರೆ. ಇಂಗ್ಲೆಂಡ್’ನ ಮೈಕಲ್ ಅಥರ್ಟನ್ 1995ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಾಲ್ಕನೇ ಇನ್ನಿಂಗ್ಸ್‌ನಲ್ಲಿ 185 ರನ್ ಗಳಿಸಿದ್ದು ಇದುವರೆಗಿನ ದಾಖಲೆಯಾಗಿತ್ತು. ಈ ಮೂಲಕ ತಮ್ಮ 2 ವರ್ಷಗಳ ಶತಕದ ‘ಬರ’ವನ್ನು ಬಾಬರ್ ಕೊನೆಗೊಳಿಸಿದರು.

Join Whatsapp
Exit mobile version