ನವದೆಹಲಿ : ಕೋವಿಡ್ ಪ್ರಕರಣಗಳಿಗೆ ಚಿಕಿತ್ಸೆ ಕೊಡುವ ವಿಚಾರದಲ್ಲಿ ಅಲೋಪಥಿ ವೈದ್ಯ ವ್ಯವಸ್ಥೆ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಕ್ಕೆ ವಿವಿಧ ಕಡೆಗಳಲ್ಲಿ ದಾಖಲಾಗಿರುವ ಎಫ್ ಐಆರ್ ಗಳ ಕಾನೂನು ಪ್ರಕ್ರಿಯೆಗೆ ತಡೆ ನೀಡುವಂತೆ ಯೋಗಗುರು ಬಾಬಾ ರಾಮ್‌ದೇವ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.
ಭಾರತೀಯ ವೈದ್ಯಕೀಯ ಸಂಘದ ಪಾಟ್ನಾ ಮತ್ತು ರಾಯ್ಪುರ್ ನಲ್ಲಿ ದಾಖಲಾಗಿರುವ ಎಫ್ ಐಆರ್ ಗಳ ಕಾನೂನು ಪ್ರಕ್ರಿಯೆಗೆ ತಡೆ ನೀಡಿ, ಅವುಗಳನ್ನು ದೆಹಲಿಗೆ ವರ್ಗಾಯಿಸುವಂತೆ ಅವರು ಕೋರ್ಟ್ ಗೆ ಮನವಿ ಮಾಡಿದ್ದಾರೆ.
ಕೋವಿಡ್ ಚಿಕಿತ್ಸೆಯಲ್ಲಿ ನೀಡಲಾಗುತ್ತಿರುವ ಔಷಧಿಗಳ ಬಗ್ಗೆ ತಪ್ಪು ಮಾಹಿತಿ ಹರಡುತ್ತಿದ್ದಾರೆ ಎಂದು ಆಪಾದಿಸಿ ರಾಯ್ಪುರದಲ್ಲಿ ಪೊಲೀಸರು ದೂರು ದಾಖಲಿಸಿದ್ದಾರೆ. ಐಎಂಎ ಛತ್ತೀಸ್ ಗಢ ಘಟಕ ನೀಡಿರುವ ದೂರಿನ ಆಧಾರದಲ್ಲಿ ಪೊಲೀಸರು ರಾಮಕೃಷ್ಣ ಯಾದವ್ ಅಲಿಯಾಸ್ ಬಾಬಾ ರಾಮ್ ದೇವ್ ವಿರುದ್ಧ ದೂರು ದಾಖಲಿಸಿಕೊಂಡಿದ್ದಾರೆ.