Home ಟಾಪ್ ಸುದ್ದಿಗಳು ದೆಹಲಿಯ ‘ಬಾಬಾ ಕಾ ಧಾಬಾ’ ದಂಪತಿಗೆ ಜನರು ನೀಡಿದ್ದ ದೇಣಿಗೆಯ ದುರ್ಬಳಕೆಯ ಆರೋಪ

ದೆಹಲಿಯ ‘ಬಾಬಾ ಕಾ ಧಾಬಾ’ ದಂಪತಿಗೆ ಜನರು ನೀಡಿದ್ದ ದೇಣಿಗೆಯ ದುರ್ಬಳಕೆಯ ಆರೋಪ

ನವದೆಹಲಿ : ಕೊರೊನ ಸಂಕಷ್ಟದ ವೇಳೆ, ಹಣಕಾಸಿನ ತೊಂದರೆಯಲ್ಲಿದ್ದ ತಮ್ಮ ಬಗ್ಗೆ ಯೂಟ್ಯೂಬ್ ನಲ್ಲಿ ವೀಡಿಯೊ ಅಪ್ ಲೋಡ್ ಮಾಡಿ, ಸಹಾಯಕ್ಕಾಗಿ ಯಾಚಿಸಿದ್ದ ಯೂಟ್ಯೂಬರ್ ಒಬ್ಬರು ಆ ಮೂಲಕ ಬಂದ ಹಣ ದುರ್ಬಳಕೆ ಮಾಡಿದ್ದಾರೆ ಎಂದು ದೆಹಲಿಯ ಮಾಳವೀಯ ನಗರದ ‘ಬಾಬಾ ಕಾ ಧಾಬಾ’ ಮಾಲಕ ಕಾಂತಪ್ರಸಾದ್ ದೂರು ನೀಡಿದ್ದಾರೆ.  

ಉಪಹಾರ-ಊಟದ ಚಿಕ್ಕ ಸ್ಟಾಲ್ ಹೊಂದಿದ್ದ ವಯೋವೃದ್ಧ ಕಾಂತಪ್ರಸಾದ್ ಮತ್ತು ಅವರ ಪತ್ನಿಗೆ ಕೊರೊನ ಸಂಕಷ್ಟದ ವೇಳೆ ವ್ಯಾಪಾರವಿಲ್ಲದೆ ನಷ್ಟವನ್ನು ಅನುಭವಿಸಿದ್ದ ವೀಡಿಯೊವೊಂದನ್ನು ಯೂಟ್ಯೂಬ್ ನಲ್ಲಿ ಗೌರವ್ ವಾಸನ್ ಎಂಬವರು ಅಪ್ ಲೋಡ್ ಮಾಡಿದ್ದರು. ಆ ನಂತರ ಅದು ಏಕಾಏಕಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಕಾಂತಪ್ರಸಾದ್ ಜೀವನ ನಿರ್ವಹಣೆಗೆ ಕಷ್ಟಪಡುತ್ತಿರುವುದರ ಕುರಿತು ಅಳುತ್ತಿರುವ ವೀಡಿಯೊ ಮಾಡಿದ್ದ ವಾಸನ್, ವಯೋವೃದ್ಧ ಬಡ ವ್ಯಾಪಾರಿ ದಂಪತಿಗೆ ಸಹಾಯ ಮಾಡುವಂತೆ ಕೋರಿದ್ದರು. ಇದು ಟ್ವಿಟರ್ ನಲ್ಲಿ ಟ್ರೆಂಡಿಂಗ್ ಕೂಡ ಆಗಿತ್ತು.

ವಾಸನ್ ಉದ್ದೇಶಪೂರ್ವಕವಾಗಿ ತಮ್ಮ ಹಾಗೂ ತಮ್ಮ ಸಂಬಂಧಿಗಳು, ಸ್ನೇಹಿತರ ಬ್ಯಾಂಕ್ ಖಾತೆಯ ವಿವರಗಳನ್ನು ನೀಡಿದ್ದರು ಮತ್ತು ದೊಡ್ಡ ಮೊತ್ತದ ದೇಣಿಗೆ ಸಂಗ್ರಹಿಸಿದ್ದಾರೆ. ಆದರೆ ವಾಸನ್ ಕೇವಲ 2 ಲಕ್ಷ ರೂ. ತಮಗೆ ನೀಡಿದ್ದಾರೆ. ವಿಷಯಕ್ಕೆ ಸಂಬಂಧಿಸಿದ ಹಣಕಾಸು ವ್ಯವಹಾರದ ಯಾವುದೇ ವಿವರಗಳನ್ನು ವಾಸನ್ ತಮಗೆ ನೀಡಿಲ್ಲ ಎಂದು ಕಾಂತಪ್ರಸಾದ್ ಆರೋಪಿಸಿದ್ದಾರೆ.

ಗ್ರಾಹಕರ ಸಂಖ್ಯೆ ಹೆಚ್ಚಿಲ್ಲ, ಜನರು ಸೆಲ್ಫಿ ತೆಗೆದುಕೊಳ್ಳಲು ಬರುತ್ತಾರೆ ಅಷ್ಟೇ, ಹಿಂದೆ ದಿನಕ್ಕೆ 10,000 ರೂ. ವ್ಯಾಪಾರ ಆಗುತಿತ್ತು, ಈಗ ದಿನಕ್ಕೆ ಕೇವಲ 3,000-5,000 ರೂ. ವ್ಯಾಪಾರ ಮಾತ್ರ ಆಗುತ್ತದೆ ಎಂದು ಕಾಂತಪ್ರಸಾದ್ ಹೇಳಿದ್ದಾರೆ.

ಆದರೆ, ವಾಸನ್ ಈ ಆರೋಪಗಳನ್ನು ತಳ್ಳಿ ಹಾಕಿದ್ದಾರೆ. ಈ ವೀಡಿಯೊ ಅಪ್ ಲೋಡ್ ಮಾಡುವಾಗ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಸುದ್ದಿಯಾಗುತ್ತದೆ ಎಂದು ತಿಳಿದಿರಲಿಲ್ಲ. ಜನರು ಬಾಬಾಗೆ ತೊಂದರೆ ಕೊಡುವುದು ಬೇಡ ಎಂದು ನಾನು ನನ್ನ ಬ್ಯಾಂಕ್ ಖಾತೆ ವಿವರಗಳನ್ನು ನೀಡಿದ್ದೆ ಎಂದು ಅವರು ಹೇಳಿದ್ದಾರೆ.   

Join Whatsapp
Exit mobile version