ಬೆಂಗಳೂರು : 2023ರ ಕರ್ನಾಟಕ ವಿಧಾನಸಭಾ ಚುನಾವಣಾ ಹಿನ್ನೆಲೆಯಲ್ಲಿ ಜೆಡಿಎಸ್ ಪಕ್ಷವು ತನ್ನ ಪ್ರಣಾಳಿಕೆ ರಚನಾ ಸಮಿತಿಯನ್ನು ರಚಿಸಿದೆ. ಜೆಡಿಎಸ್ ಪಕ್ಷದ ವಿಧಾನ ಪರಿಷತ್ ಸದಸ್ಯರಾದ ಬಿ.ಎಂ ಫಾರೂಕ್ ಅವರ ನೇತೃತ್ವದಲ್ಲಿ ಜೆಡಿಎಸ್ ಪಕ್ಷದ ಚುನಾವಣಾ ಪ್ರಣಾಳಿಕೆ ತಯಾರಾಗಲಿದೆ.
ಬಿ.ಎಂ ಫಾರೂಕ್ ಅವರ ನೇತೃತ್ವದಲ್ಲಿ ನಾಲ್ವರು ಸದಸ್ಯರ “ಜನತೆಯ ನಿರೀಕ್ಷೆಗಳಿಗೆ – ಜನತಾ ಪ್ರಣಾಳಿಕೆ’’ ಹೆಸರಿನ ಪ್ರಣಾಳಿಕೆ ರಚನೆ ಸಮಿತಿಯನ್ನು ರಚಿಸಿ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾದ ಹೆಚ್.ಡಿ ದೇವೇಗೌಡರು ಆದೇಶ ಹೊರಡಿಸಿದ್ದಾರೆ. ಬಿ.ಎಂ ಫಾರೂಕ್ ಅಧ್ಯಕ್ಷತೆಯ ಸಮಿತಿಯಲ್ಲಿ ಜೆಡಿಎಸ್ ಶಾಸಕರಾದ ಬಂಡೆಪ್ಪ ಖಾಶೆಂಪೂರ್ ಮತ್ತು ಮಾಜಿ ಸಂಸದರಾದ ಕುಪೇಂದ್ರ ರೆಡ್ಡಿ ಅವರು ಸದಸ್ಯರಾಗಿದ್ದು, ವಿಧಾನ ಪರಿಷತ್ ಸದಸ್ಯರಾದ ಕೆ.ಎ ತಿಪ್ಪೇಸ್ವಾಮಿ ಅವರು ಸದಸ್ಯ ಹಾಗೂ ಕಾರ್ಯದರ್ಶಿಯಾಗಿ ನೇಮಕವಾಗಿದ್ದಾರೆ.
ಕರ್ನಾಟಕದ ಸರ್ವೋತೋಮುಖ ಅಭಿವೃದ್ಧಿಗೆ ಮತ್ತು ರಾಜ್ಯದ ಜನರ ಆಶೋತ್ತರಗಳ ಈಡೇರಿಕೆಗಾಗಿ ಜನರ ನಿರೀಕ್ಷೆಗಳನ್ನೊಳಗೊಂಡ “ಜನತೆಯ ನಿರೀಕ್ಷೆಗಳಿಗೆ – ಜನತಾ ಪ್ರಣಾಳಿಕೆ’’ ತಯಾರಿಸುವಂತೆ ಹೆಚ್.ಡಿ ದೇವೇಗೌಡರು ತನ್ನ ಆದೇಶದಲ್ಲಿ ಸೂಚನೆ ಕೊಟ್ಟಿದ್ದಾರೆ.