Home ಟಾಪ್ ಸುದ್ದಿಗಳು ‘ಸಿಎಂ ಆಯ್ಕೆ ಮಾಡೋದು, ಕೆಳಗೆ ಇಳಿಸೋದು ಚೆನ್ನಾಗಿ ಗೊತ್ತು’ ಹೇಳಿಕೆ: ವಾಪಸ್ ಪಡೆಯುವ ಜಾಯಮಾನ ನನ್ನದಲ್ಲ...

‘ಸಿಎಂ ಆಯ್ಕೆ ಮಾಡೋದು, ಕೆಳಗೆ ಇಳಿಸೋದು ಚೆನ್ನಾಗಿ ಗೊತ್ತು’ ಹೇಳಿಕೆ: ವಾಪಸ್ ಪಡೆಯುವ ಜಾಯಮಾನ ನನ್ನದಲ್ಲ ಎಂದ ಬಿ ಕೆ ಹರಿಪ್ರಸಾದ್

ಬೆಂಗಳೂರು: ಮುಖ್ಯಮಂತ್ರಿ ಆಯ್ಕೆ ಮಾಡೋದು, ಕೆಳಗೆ ಇಳಿಸೋದು ಚೆನ್ನಾಗಿ ಗೊತ್ತು ಎಂಬ ಹೇಳಿಕೆಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ಹಿರಿಯ ಕಾಂಗ್ರೆಸ್ ಮುಖಂಡ, ವಿಧಾನ ಪರಿಷತ್ ಸದಸ್ಯ ಬಿ ಕೆ ಹರಿಪ್ರಸಾದ್, ‘ನಾನು ಒಂದು ಪದ ಹೇಳಿದ್ದಿದ್ದರೆ ಅದನ್ನು ಹೇಳಿದ್ದೀನಿ ಅಂತ ಹೇಳ್ತೀನೇ ಹೊರತು, ಹೇಳಿಕೆಗಳನ್ನು ವಾಪಸ್ ಪಡೆಯುವ ಜಾಯಮಾನ ನನ್ನದಲ್ಲ ಎಂದು ತಿಳಿಸಿದ್ದಾರೆ.


ಮಂಗಳೂರಿನ ಖಾಸಗಿ ಹೊಟೇಲ್ ನಲ್ಲಿ ಈಡಿಗ, ಬಿಲ್ಲವ, ದೀವರ ಮುಖಂಡರ ಸಭೆ ನಡೆದಿತ್ತು. ಅದರಲ್ಲಿ ಹಿಂದುಳಿದ ಸಮುದಾಯಗಳ ಅಸ್ತ್ರವನ್ನು ಸಿಎಂ ಸಿದ್ದರಾಮಯ್ಯ ಮೇಲೆ ಹರಿಪ್ರಸಾದ್ ಬಿಟ್ಟಿದ್ದಾರೆ.ನನಗೆ ಸಿಎಂ ಆಯ್ಕೆ ಮಾಡೋದು ಗೊತ್ತು, ಕೆಳಗೆ ಇಳಿಸೋದು ಗೊತ್ತಿದೆ. ನಾನು ಯಾರ ಬಳಿಯೂ ಭಿಕ್ಷೆ ಬೇಡುವುದಿಲ್ಲ, ಎದೆ ಕೊಟ್ಟು ನಿಲ್ಲುತ್ತೇನೆ. ನಾನು ಮಂತ್ರಿ ಆಗೋದು ಬಿಡೋದು ಬೇರೆ ಪ್ರಶ್ನೆ. ಐವರನ್ನು ಸಿಎಂ ಆಯ್ಕೆ ಮಾಡುವುದರಲ್ಲಿ ನಾನು ಪಾತ್ರವಹಿಸಿದ್ದೇನೆ, ಸಮುದಾಯಕ್ಕೆ ನೀವೇನು ಕೊಟ್ಟಿದ್ದೀರಿ ಎಂದು ಬಹಿರಂಗವಾಗಿಯೇ ಸಿಎಂ ಸಿದ್ದರಾಮಯ್ಯ ಹೆಸರು ಹೇಳಿ ತಮ್ಮ ಅಸಮಾಧಾನ, ಆಕ್ರೋಶ, ಸಿಟ್ಟನ್ನು ಹೊರಹಾಕಿದ್ದರು. ಅವರ ಈ ಹೇಳಿಕೆಯನ್ನು ಸಭೆಯಲ್ಲಿದ್ದವರು ಮೊಬೈಲ್ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದರು. ಬಳಿಕ ಅದು ಸೋಷಿಯಲ್ ಮೀಡಿಯಾ ಸೇರಿದಂತೆ ಮಾಧ್ಯಮಗಳಲ್ಲಿ ಹರಿದಾಡಿತ್ತು. ಈ ಹೇಳಿಕೆ ಬಗ್ಗೆ ಬೆಂಗಳೂರಿನ ತಮ್ಮ ನಿವಾಸದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್, ‘ಸಮುದಾಯದ ಸಭೆ ಇದೆ ಎಂದು ಸ್ವಾಮೀಜಿಗಳು ಕರೆದಿದ್ದರು. ಅದಕ್ಕಾಗಿ ಹೋಗಿ ಮಾತನಾಡಿದ್ದೆ. ಒಂದು ಪದ ಹೇಳಿದ್ದಿದ್ದರೆ ಅದನ್ನು ವಾಪಸ್ ತಗೊಂಡಿರೋ ಜಾಯಮಾನ ನನ್ನದಲ್ಲ. ಹೇಳಿದ್ದು ವಾಪಸ್ ತಗೊಳ್ಳಲ್ಲ. ಹೇಳದೇ ಇರೋದನ್ನು ಹೇಳೋದಕ್ಕೆ ಹೋಗಲ್ಲ. ಇದನ್ನು ಮತ್ತೆ ಮುಂದುವರಿಸುವುದಕ್ಕೂ ಹೋಗಲ್ಲ’ ಎಂದು ತಿಳಿಸಿದ್ದಾರೆ.


‘ಸಭೆಯಲ್ಲಿ ಕ್ಯಾಮರಾ ಇರಲಿಲ್ಲ ಅಂತ ಸ್ವಲ್ಪ ಏನೋ ಮಾತನಾಡಿದ್ದೆ. ಕ್ಯಾಮರಾ ಇದ್ದಾಗ ಎಷ್ಟು ಮಾತನಾಡಬೇಕೋ ಅಷ್ಟನ್ನೇ ಮಾತನಾಡ್ತೀನಿ. ನಾನು ಮಾತನಾಡಿದ್ದನ್ನು ಯಾರೋ ಮೊಬೈಲ್ನಲ್ಲಿ ರೆಕಾರ್ಡಿಂಗ್ ಮಾಡಿಕೊಂಡು, ಬಳಿಕ ಫೇಸ್ಬುಕ್ನಲ್ಲಿ ಹಾಕಿದ್ದಾರೆ’ ಎಂದು ಹೇಳುವ ಮೂಲಕ ತಾವು ಮಾತನಾಡಿರುವುದನ್ನು ನೇರವಾಗಿಯೇ ಒಪ್ಪಿಕೊಂಡಿದ್ದಾರೆ.

Join Whatsapp
Exit mobile version