ಧ್ವನಿವರ್ಧಕ ಬಳಕೆ ಕಡಿವಾಣದಲ್ಲಿ‌ ಆಝಾನ್ ಗೆ ನಿರ್ಬಂಧ ಹೇರಿಲ್ಲ : ವಕ್ಫ್ ಬೋರ್ಡ್ ಸ್ಪಷ್ಟೀಕರಣ

Prasthutha: March 17, 2021

ಬೆಂಗಳೂರು: ರಾಜ್ಯದ ವಕ್ಫ್‌ ಬೋರ್ಡ್‌ನಲ್ಲಿ ನೋಂದಣಿಯಾಗಿರುವ ಮಸೀದಿಗಳು ಮತ್ತು ದರ್ಗಾಗಳಲ್ಲಿ ರಾತ್ರಿ 10ರಿಂದ ಬೆಳಗ್ಗೆ 6 ಗಂಟೆವರೆಗೆ ಧ್ವನಿವರ್ಧಕ ಬಳಕೆಗೆ ಕಡಿವಾಣ ಹಾಕಲಾಗಿದೆಯೇ ಹೊರತು ಸುತ್ತೋಲೆಯಲ್ಲಿ ಅಝಾನ್‌ಗೆ ಯಾವುದೇ ನಿರ್ಬಂಧ ಹೇರಿಲ್ಲ ಎಂದು ವಕ್ಫ್‌ ಬೋರ್ಡ್‌ ತಿಳಿಸಿದೆ.

ಶಬ್ದ ಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ಈ ಮೇಲಿನ ಆದೇಶವನ್ನು ಮಾರ್ಚ್ 9ರಂದು ಹೊರಡಿಸಲಾಗಿದ್ದು, ವಕ್ಫ್‌ ಬೋರ್ಡ್‌ ಹೊರಡಿಸಿರುವ ಮಹತ್ವದ ಆದೇಶದ ವಿಚಾರವಾಗಿ ಸಾಕಷ್ಟು ಗೊಂದಲಗಳು ಎದುರಾಗಿದ್ದವು. ಇದೀಗ ರಾಜ್ಯ ವಕ್ಫ್‌ ಬೋರ್ಡ್‌ ಸದಸ್ಯ ಮತ್ತು ಕರ್ನಾಟಕ ಮುಸ್ಲಿಂ ಜಮಾತ್‌ನ ರಾಜ್ಯ ಪ್ರಧಾನ ಕಾರ್ಯದರ್ಶಿ ಮೌಲಾನ ಶಾಫಿ ಸಾದಿ ಟ್ವೀಟ್ ಮೂಲಕ ಸ್ಪಷ್ಟೀಕರಣ ನೀಡಿದ್ದು ಯಾವುದೇ ಸಮಸ್ಯೆ ಇಲ್ಲ ಎಂದು ತಿಳಿಸಿದ್ದಾರೆ.

‘ಅಝಾನ್ ಬಗ್ಗೆ ರಾಜ್ಯ ವಕ್ಫ್ ಮಂಡಳಿ ಯಾವುದೇ ನಿರ್ಬಂಧ ಹೇರಿಲ್ಲ. ಸುತ್ತೋಲೆಯ ಕ್ರಮ ಸಂಖ್ಯೆ ಮೂರರಲ್ಲಿ ಸ್ಪಷ್ಟವಾಗಿ ಅಝಾನ್ ಮತ್ತು ಇತರ ಯಾವ ವಿಚಾರಗಳಿಗೆ ಧ್ವನಿವರ್ಧಕ ಬಳಸಬಹುದೆಂದು ಸ್ಪಷ್ಟಪಡಿಸಲಾಗಿರುತ್ತದೆ. 10-07-2017 ರಂದು ಆಗಿನ ವಕ್ಫ್ ಮಂಡಳಿಯ ಆಡಳಿತಾಧಿಕಾರಿಯವರು ಹೊರಡಿಸಿದ ಸುತ್ತೋಲೆಯ ಯಥಾ ಪ್ರತಿಯನ್ನೇ 19-12-2020 ರಂದು ಹೊರಡಿಸಲಾಗಿದೆ. ನಿರ್ಣಯದಲ್ಲಿ ಯಾವುದೇ ಲೋಪದೋಷಗಳಿದ್ದರೂ ಮುಂದಿನ ಸಭೆಯಲ್ಲಿ ಚರ್ಚಿಸಿ ಸರಿಪಡಿಸಲಾಗುವುದು ಎಂದು ಟ್ವೀಟ್‌ ನಲ್ಲಿ ತಿಳಿಸಿದ್ದಾರೆ.

ಇತ್ತೀಚೆಗೆ ಹೊರಡಿಸಿದ್ದ ಆದೇಶ

ಶಬ್ದಮಾಲಿನ್ಯವನ್ನು ತಡೆಗಟ್ಟುವ ನಿಟ್ಟಿನಲ್ಲಿ ಇತ್ತೀಚೆಗೆ ವಕ್ಫ್ ಬೋರ್ಡ್ ಹೊಸ ಆದೇಶ ಹೊರಡಿಸಿತ್ತು. ಅದರಲ್ಲಿ ನಿಗದಿತ ಸಮಯದಲ್ಲಿ ಧ್ವನಿವರ್ಧಕಗಳ ಬಳಕೆಯನ್ನು ತಡೆಯುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿತ್ತು. ಅಲ್ಲದೇ ಶಬ್ದ ಮಾಲಿನ್ಯದಿಂದ ಆರೋಗ್ಯದ ಮೇಲಷ್ಟೇ ಅಲ್ಲ, ಜನಸಾಮಾನ್ಯರ ಮನಸ್ಸಿನ ಮೇಲೆಯೂ ಗಂಭೀರ ಪರಿಣಾಮ ಬೀಳಲಿದೆ. ಆಸ್ಪತ್ರೆಗಳು, ನ್ಯಾಯಾಲಯ, ಶೈಕ್ಷಣಿಕ ಸಂಸ್ಥೆಗಳು ಸೇರಿದಂತೆ ನಿಶ್ಯಬ್ದ ವಲಯಗಳಲ್ಲಿ ರಾತ್ರಿ 10ರಿಂದ ಬೆಳಗ್ಗೆ 6 ಗಂಟೆವರೆಗೆ ಧ್ವನಿವರ್ಧಕ ಬಳಸೋದು ಪರಿಸರ ಸಂರಕ್ಷಣಾ ಕಾಯ್ದೆಯನ್ವಯ ದಂಡನಾರ್ಹವಾಗಿದೆ. ಈ ಹಿನ್ನೆಲೆ ರಾತ್ರಿ 10ರಿಂದ ಬೆಳಗ್ಗೆ 6 ಗಂಟೆವರೆಗೆ ಮಸೀದಿ ಹಾಗೂ ದರ್ಗಾಗಳಲ್ಲಿ ಧ್ವನಿವರ್ಧಕ ಬಳಸುವಂತಿಲ್ಲ. ಉಳಿದ ಸಮಯಗಳಲ್ಲಿ ಶಬ್ದ ಮಾಲಿನ್ಯ ನಿಯಂತ್ರಣ ನಿಯಮಗಳನ್ನು ಗಮನದಲ್ಲಿಟ್ಟು ಮೈಕ್‌ ಬಳಸಬೇಕು ಎಂದು ಸ್ಪಷ್ಟವಾಗಿ ತಿಳಿಸಿತ್ತು.

ಆದರೆ ಇದರಿಂದ ಮುಸ್ಲಿಂ ಧರ್ಮಿಯರಲ್ಲಿ ಸಾಕಷ್ಟು ಗೊಂದಲಗಳು ಉಂಟಾಗಿ ಹೋರಾಟದ ಹಾದಿಯನ್ನು ಕೆಲವರು ತುಳಿದಿದ್ದರು. ಗೊಂದಲವನ್ನು ಅರಿತ ಬೋರ್ಡ್ ಇದೀಗ ಟ್ವೀಟ್ ಮೂಲಕ ಸ್ಪಷ್ಟೀಕರಣ ನೀಡುವ ಕಾರ್ಯ ಮಾಡಿದೆ.

ಅಂದಿನ ಆದೇಶದಲ್ಲಿ ಏನಿತ್ತು?

2021ರ ಮಾರ್ಚ್ ಒಂಬತ್ತಕ್ಕೆ ರಾಜ್ಯ ವಕ್ಫ್ ಬೋರ್ಡ್ ಹೊರಡಿಸಿದ ಆದೇಶದಲ್ಲಿ ಅತ್ಯಂತ ಪ್ರಮುಖವಾಗಿ, ರಾತ್ರಿ 10ರಿಂದ ಬೆಳಗ್ಗೆ 6 ಗಂಟೆವರೆಗೆ ಧ್ವನಿವರ್ಧಕಗಳನ್ನು ಬಳಸಬಾರದು. ಹಗಲಿನಲ್ಲಿ ಬಳಸುವ ಧ್ವನಿವರ್ಧಕಗಳು ಶಬ್ದಕ್ಕೆ ಸಂಬಂಧಿಸಿದಂತೆ ಸುತ್ತುರಿದ ಗಾಳಿಯ ಗುಣಮಟ್ಟದ ಮಾನದಂಡಗಳ ಪ್ರಕಾರ ಇರಬೇಕು. ಧ್ವನಿವರ್ಧಕವನ್ನು ಅಝಾನ್‌ ಮತ್ತು ಸಾವು, ಸಮಾಧಿಯ ಸಮಯ, ಚಂದ್ರನನ್ನು ನೋಡುವುದು ಸೇರಿದಂತೆ ಇನ್ನಿತರ ಪ್ರಮುಖ ಘೋಷಣೆಗಳಿಗೆ ಮಾತ್ರ ಬಳಸಬೇಕು. ಸಲಾತ್, ಜುಮಾ ಖುತ್ಬಾ, ಬಯಾನ್ಸ್, ಧಾರ್ಮಿಕ ಇನ್ನಿತರ ಕಾರ್ಯಕ್ರಮಗಳಿಗೆ ಮಸೀದಿ ಅಥವಾ ದರ್ಗಾದ ಆವರಣದೊಳಗೆ ಇರುವ ಮೈಕ್‌ಗಳನ್ನು ಬಳಸಬೇಕು. ಯಾವುದೇ ಸಂದರ್ಭದಲ್ಲಿ ಶಬ್ದಗಳನ್ನು ಹೊರಸೂಸುವ ಪಟಾಕಿಗಳನ್ನು ಮಸೀದಿ, ದರ್ಗಾದ ಆವರಣದಲ್ಲಿ ಸುಡಬಾರದು ಎಂದು ತಿಳಿಸಿದೆ.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ

error: Content is protected !!