ಶ್ರೀನಗರ: ಲೋಕಸಭಾ ಚುನಾವಣೆ ಅಖಾಡ ರಂಗೇರುತ್ತಿರುವಾಗಲೇ ಜಮ್ಮು ಮತ್ತು ಕಾಶ್ಮೀರದಲ್ಲಿ ಅನಂತನಾಗ್-ರಜೌರಿ ಕ್ಷೇತ್ರದಿಂದ ಅಖಾಡಕ್ಕಿಳಿದಿರುವ ಡೆಮಾಕ್ರಟಿಕ್ ಪ್ರೊಗೆಸ್ಸ್ ಅಝಾದ್ ಪಾರ್ಟಿ ಮುಖ್ಯಸ್ಥ ಗುಲಾಮ್ ನಬಿ ಆಝಾದ್ ಸ್ಪರ್ಧಿಸುವ ನಿರ್ಧಾರದಿಂದ ಹಿಂದೆ ಸರಿಯುವುದಾಗಿ ಘೋಷಿಸಿದ್ದಾರೆ. ಮೆಹಬೂಬಾ ಮುಫ್ತಿ ವಿರುದ್ಧ ಕಣಕ್ಕಿಳಿದಿದ್ದ ಅಝಾದ್, ಭಾರಿ ಅಂತರದ ಗೆಲುವಿನ ವಿಶ್ವಾಸದಲ್ಲಿದ್ದರು. ಆದರೆ ದಿಢೀರ್ ಅಖಾಡದಿಂದ ಹಿಂದೆ ಸರಿಯುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿ ನಡೆಸಿದ DPAP ಪಕ್ಷದ ಕಾಶ್ಮೀರ ಅಧ್ಯಕ್ಷ ಮೊಹಮ್ಮದ್ ಅಮಿನ್ ಭಟ್, ಅಝಾದ್ ಸೇರಿ ಹಿರಿಯ ಮುಖಂಡರ ಜೊತೆ ಸುದೀರ್ಘ ಚರ್ಚೆ ಬಳಿಕ ಅಝಾದ್ ಕಣದಿಂದ ಹಿಂದೆ ಸರಿಯಲು ನಿರ್ಧರಿಸಿದ್ದಾರೆ. ಈ ಸ್ಥಾನದಲ್ಲಿ ಪಕ್ಷದ ನಾಯಕ ಅಡ್ವಕೇಟ್ ಮೊಹಮ್ಮದ್ ಸಲೀಮ್ ಪರೇಯನ್ನು ಕಣಕ್ಕಿಳಿಸಲಾಗುತ್ತದೆ ಎಂದಿದ್ದಾರೆ.
ಕಾಂಗ್ರೆಸ್ ತೆಗೆದುಕೊಳ್ಳುತ್ತಿರುವ ನಿರ್ಧಾರಗಳಿಗೆ ಬೇಸತ್ತು ಪಕ್ಷ ತೊರೆದ ಹಿರಿಯ ನಾಯಕ ಹಾಗೂ ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಗುಲಾಂ ನಬಿ ಆಜಾದ್ ತಮ್ಮದೇ ಸ್ವಂತ ಪಕ್ಷ ರಚಿಸಿಕೊಂಡು ಭಾರಿ ಸಂಚಲನ ಸೃಷ್ಟಿಸಿದ್ದರು. ಆದರೆ ಕಣದಿಂದ ಹಿಂದೆ ಸರಿಯುವ ಮೂಲಕ ಅಚ್ಚರಿ ನೀಡಿದ್ದಾರೆ.