ಮಂಗಳೂರು: ರಾಜ್ಯದಲ್ಲಿ ಆಝಾನ್ ಕುರಿತು ಹಿಂದುತ್ವ ಸಂಘಟನೆಗಳು ಸೃಷ್ಟಿಸಿರುವ ವಿವಾದದ ಬಗ್ಗೆ ಪ್ರತಿಕ್ರಿಯಿಸಿರುವ ಮುಸ್ಲಿಂ ಸೆಂಟ್ರಲ್ ಕಮಿಟಿ ಅಧ್ಯಕ್ಷ ಕೆ. ಎಸ್. ಮುಹಮ್ಮದ್ ಮಸೂದ್, ಆಝಾನ್ ಸರ್ಕಾರದ ಮಾರ್ಗಸೂಚಿಯಂತೆ ಪಾಲನೆಯಾಗುತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಯಾವ ಮಸೀದಿಯಲ್ಲಿ ಸರ್ಕಾರದ ಆದೇಶ ಮೀರಿ ಧ್ವನಿವರ್ಧಕ ಬಳಕೆ ಆಗುತ್ತಿದೆ ಎಂದು ಮೊದಲು ಬಹಿರಂಗ ಪಡಿಸಲಿ, ಆಝಾನಿನಿಂದ ಶಬ್ದ ಮಾಲಿನ್ಯ ಉಂಟಾಗುತ್ತದೆ ಎನ್ನುವುದಾದರೆ ಪಟಾಕಿ, ಭಜನೆ, ಚೆಂಡೆಗಳಲ್ಲೂ ಆಗುತ್ತದೆ. ಇದನ್ನು ಕೂಡಾ ಇವರು ಬಂದ್ ಮಾಡಿಸುತ್ತಾರಾ ಎಂದು ಪ್ರಶ್ನಿಸಿದ್ದಾರೆ.
ಶಬ್ದ ಮಾಲಿನ್ಯ ಆಗುವ ಪ್ರದೇಶಗಳಲ್ಲಿ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಲಿ, ಆದರೆ ಅಝಾನ್ ಬಂದ್ ಮಾಡಲು ಹೇಳಲು ಇವರು ಯಾರು?. ಮುಂದಿನ ಚುನಾವಣೆಗೆ ಇಲ್ಲಿ ರಾಜಕೀಯ ಮಾಡಲಾಗುತ್ತಿದೆ. ಹಿಜಾಬ್ ಆಯ್ತು, ಮುಸ್ಲಿಂ ವ್ಯಾಪಾರಸ್ಥರು ಆಯ್ತು, ಹಲಾಲ್, ಜಟ್ಕಾ ಕಟ್ ಆಯ್ತು ಈಗಾ ಮಸೀದಿ ಆಝಾನ್ ಮತ್ತು ಮಾವಿನ ಹಣ್ಣು ವ್ಯಾಪಾರ ನಿಷೇಧ.. ಇನ್ನೂ ಯಾವುದರಲ್ಲಿ ರಾಜಕೀಯ ಮಾಡ್ತೀರಾ ಎಂದು ಮಸೂದ್ ವಾಗ್ದಾಳಿ ನಡೆಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮು ಕದಡುವ ಚಟುವಟಿಕೆಗಳು ಆಗುತ್ತಿವೆ, ಈ ಬಗ್ಗೆ ಸರ್ಕಾರ, ಸಿಎಂ, ಗೃಹ ಮಂತ್ರಿ, ಜಿಲ್ಲಾಧಿಕಾರಿ, ಕಮಿಷನರ್ ಎಚ್ಚೆತ್ತು ಕೊಳ್ಳಬೇಕಿದೆ. ಜನರಿಗೆ ರಕ್ಷಣೆಯ ಅಗತ್ಯ ಇದೆಯೇ ಹೊರತು ಕೋಮು ದ್ವೇಷ ಅಲ್ಲ, ಈ ಬಗ್ಗೆ ಜನರು ಕೂಡ ಎಚ್ಚೆತ್ತುಕೊಳ್ಳಬೇಕು ಎಂದು ವಿನಂತಿಸಿದ್ದಾರೆ.