ರಾಂಚಿ : ಕೋವಿಡ್ ಸೋಂಕಿತರಿಗೆ ಆಯುಷ್ಮಾನ್ ಭಾರತ್ ಯೋಜನೆಯಡಿ ಪ್ರಯೋಜನ ಪಡೆದ ರಾಜ್ಯಗಳ ಪಟ್ಟಿಯಲ್ಲಿ ಜಾರ್ಖಂಡ್ ಮೊದಲನೇ ಸ್ಥಾನದಲ್ಲಿದೆ ಎಂದು ಅಲ್ಲಿನ ಆರೋಗ್ಯ ಸಚಿವ ಬನ್ನಾ ಗುಪ್ತಾ ಹೇಳಿದ್ದಾರೆ.
ಈ ಯೋಜನೆಯಡಿ ರಾಜ್ಯದಲ್ಲಿ 1,419 ಮಂದಿ ಪ್ರಯೋಜನ ಪಡೆದಿದ್ದಾರೆ. ಬಿಹಾರದಲ್ಲಿ ಕೇವಲ 19 ಮಂದಿ ಮಾತ್ರ ಆಯುಷ್ಮಾನ್ ಭಾರತ್ ಯೋಜನೆಯ ಲಾಭ ಪಡೆದಿದ್ದಾರೆ. ದೇಶದ ಅತಿ ದೊಡ್ಡ ರಾಜ್ಯ, ಅತಿ ಹೆಚ್ಚು ಜನಸಂಖ್ಯೆ ಇರುವ ಉತ್ತರ ಪ್ರದೇಶದಲ್ಲಿ ಕೇವಲ 875 ಮಂದಿ ಆಯುಷ್ಮಾನ್ ಯೋಜನೆಯಡಿ ಪ್ರಯೋಜನ ಪಡೆದಿದ್ದಾರೆ ಎಂದು ಅವರು ಹೇಳಿದ್ದಾರೆ.
ಬಿಜೆಪಿ ಆಡಳಿತವಿರುವ ರಾಜ್ಯಗಳೇ ಈ ಯೋಜನೆಯನ್ನು ನಿರ್ಲಕ್ಷಿಸಿವೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ದೇಶದಲ್ಲಿ ಗುಜರಾತ್ ಮಾಡೆಲ್ ಬಗ್ಗೆ ಮಾತನಾಡಲಾಗುತ್ತದೆ. ಗುಜರಾತ್ ಮಾಡೆಲ್ ಅನ್ನು ಜಾರಿಗೊಳಿಸುವಂತೆ ಉಳಿದ ರಾಜ್ಯಗಳಿಗೆ ಸಲಹೆ ನೀಡಲಾಗುತ್ತಿರುತ್ತದೆ. ಆದರೆ, ಪ್ರಧಾನಿ ಮೋದಿಯವರ ತವರು ರಾಜ್ಯದಲ್ಲಿ, ಅವರ ಮಹತ್ವಕಾಂಕ್ಷಿ ಯೋಜನೆ ಆಯುಷ್ಮಾನ್ ಭಾರತ್ ಯೋಜನೆಯಡಿ ಯಾವೊಬ್ಬ ಕೋವಿಡ್ ಸೋಂಕಿತನೂ ಲಾಭ ಪಡೆದಿಲ್ಲ ಎಂಬ ಮಾಹಿತಿ ಅವರು ನೀಡಿದ್ದಾರೆ.