ಅಯೋಧ್ಯೆ: ಬಿಹಾರದ ಶಿಕ್ಷಣ ಸಚಿವ ಚಂದ್ರಶೇಖರ್ ಅವರ ನಾಲಿಗೆ ಕತ್ತರಿಸಿದವರಿಗೆ ₹10 ಕೋಟಿ ಬಹುಮಾನ ನೀಡುತ್ತೇನೆ ಎಂದು ಅಯೋಧ್ಯೆ ಧರ್ಮಗುರು ಪರಮಹಂಸ ಆಚಾರ್ಯ ಘೋಷಣೆ ಮಾಡಿದ್ದಾರೆ.
ರಾಮಚರಿತ ಮಾನಸ ಪುಸ್ತಕವು ದ್ವೇಷವನ್ನು ಹರಡುತ್ತದೆ ಎಂದು ಇತ್ತೀಚೆಗೆ ಸಚಿವರು ಹೇಳಿಕೆ ನೀಡಿದ್ದರು. ಸಚಿವರ ಹೇಳಿಕೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಪರಮಹಂಸ ಆಚಾರ್ಯ, ಬಿಹಾರದ ಶಿಕ್ಷಣ ಸಚಿವ ಚಂದ್ರಶೇಖರ್ ಅವರನ್ನು ಕೂಡಲೇ ನಿತೀಶ್ ಕುಮಾರ್ ಸರ್ಕಾರ ವಜಾಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.
“ರಾಮಚರಿತ ಮಾನಸ ಪುಸ್ತಕ ದ್ವೇಷವನ್ನು ಹರಡುತ್ತದೆ ಎಂಬ ಬಿಹಾರದ ಶಿಕ್ಷಣ ಸಚಿವರ ಹೇಳಿಕೆಯಿಂದ ಇಡೀ ದೇಶಕ್ಕೆ ನೋವಾಗಿದೆ. ಇದು ಎಲ್ಲಾ ಸನಾತನಿಗೆ ಅವಮಾನವಾಗಿದೆ ಮತ್ತು ಈ ಹೇಳಿಕೆಗಾಗಿ ನಾನು ಕಾನೂನು ಕ್ರಮಕ್ಕೆ ಒತ್ತಾಯಿಸುತ್ತೇನೆ. ಒಂದು ವಾರದೊಳಗೆ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕು, ಅವರು ಕ್ಷಮೆಯಾಚಿಸಬೇಕು. ಒಂದು ವೇಳೆ ಇದಾಗದಿದ್ದರೆ ಸಚಿವ ಚಂದ್ರಶೇಖರ್ ಅವರ ನಾಲಿಗೆಯನ್ನು ಕತ್ತರಿಸುವ ಯಾರಿಗಾದರೂ ನಾನು 10 ಕೋಟಿ ರೂಪಾಯಿ ಬಹುಮಾನ ಘೋಷಿಸುತ್ತೇನೆ” ಎಂದು ಅವರು ಹೇಳಿದ್ದಾರೆ.