17 ವರ್ಷಗಳ ಹಿಂದಿನ ಧೋನಿ ದಾಖಲೆ ಮುರಿದ ಅಕ್ಷರ್‌ ಪಟೇಲ್‌ !

Prasthutha|

ಟ್ರಿನಿಡಾಡ್:‌ ವೆಸ್ಟ್‌ ಇಂಡೀಸ್‌ ವಿರುದ್ಧದ ಮಹತ್ವದ ಪಂದ್ಯದಲ್ಲಿ ಭಾರತದ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದ ಅಕ್ಷರ್‌ ಪಟೇಲ್‌, ಧೋನಿ ಹೆಸರಿನಲ್ಲಿದ್ದ 17 ವರ್ಷಗಳ ಹಿಂದಿನ ದಾಖಲೆಯೊಂದನ್ನು ತನ್ನದಾಗಿಸಿಕೊಂಡಿದ್ದಾರೆ.

- Advertisement -

ಪೋರ್ಟ್ ಆಫ್ ಸ್ಪೇನ್‌ನಲ್ಲಿ ನಡೆದ ಪಂದ್ಯದಲ್ಲಿ ಭಾರತದ ಗೆಲುವಿಗೆ  ವೆಸ್ಟ್‌ ಇಂಡೀಸ್‌ 312 ರನ್‌ಗಳ ಸವಾಲಿನ ಗುರಿ ನೀಡಿತ್ತು. ಅಂತಿಮ 3 ಎಸೆತಗಳಲ್ಲಿ 6 ರನ್ ಅಗತ್ಯವಿದ್ದ ವೇಳೆ ಅಕ್ಷರ್‌ ಪಟೇಲ್‌ , ಧೋನಿ ಶೈಲಿಯಲ್ಲಿ ಸಿಕ್ಸರ್‌ ಸಿಡಿಸುವ ಮೂಲಕ ಪಂದ್ಯವನ್ನು ಮುಗಿಸಿದ್ದರು. ಏಳನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಇಳಿದಿದ್ದ ಪಟೇಲ್‌ 5 ಸಿಕ್ಸರ್‌ಗಳನ್ನು ಸಿಡಿಸುವ ಮೂಲಕ ಅಬ್ಬರಿಸಿದ್ದರು.

ಟೀಮ್ ಇಂಡಿಯಾ ಪರ ಯಶಸ್ವಿ ರನ್ ಚೇಸಿಂಗ್ ವೇಳೆ, ಏಳನೇ ಕ್ರಮಾಂಕ ಹಾಗೂ ಅದಕ್ಕಿಂತ ಕೆಳ ಕ್ರಮಾಂಕದಲ್ಲಿ ಕಣಕ್ಕಿಳಿದು ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಆಟಗಾರ ಎಂಬ ಖ್ಯಾತಿ ಇದುವರೆಗೂ ಧೋನಿ ಹೆಸರಿನಲ್ಲಿತ್ತು. 2005ರಲ್ಲಿ ಜಿಂಬಾಬ್ವೆ ವಿರುದ್ಧದ ಚೇಸಿಂಗ್‌ ವೇಳೆ ಎಂ.ಎಸ್ ಧೋನಿ  3 ಸಿಕ್ಸರ್ ಬಾರಿಸಿದ್ದರು. ನಂತರ 2011ರಲ್ಲಿ ಯೂಸುಫ್ ಪಠಾಣ್ 2 ಬಾರಿ ಯಶಸ್ವಿ ರನ್ ಚೇಸ್ ವೇಳೆ 3 ಸಿಕ್ಸರ್ ಬಾರಿಸಿ ಧೋನಿ ದಾಖಲೆಯನ್ನು ಸರಿದೂಗಿಸಿದ್ದರಾದರೂ, ಧೋನಿ ದಾಖಲೆಯನ್ನು ಮುರಿಯಲು ಸಾಧ್ಯವಾಗಿರಲಿಲ್ಲ. ಆದರೆ ಇದೀಗ ಬರೋಬ್ಬರಿ 17 ವರ್ಷಗಳ ನಂತರ ಎಂಎಸ್ ಧೋನಿ ಅವರ ಈ ದಾಖಲೆಯನ್ನು ಅಕ್ಷರ್ ಪಟೇಲ್ ತಮ್ಮದಾಗಿಸಿಕೊಂಡಿದ್ದಾರೆ.

- Advertisement -

12 ದ್ವಿಪಕ್ಷೀಯ ಸರಣಿ ಗೆದ್ದು ದಾಖಲೆ

3 ಪಂದ್ಯಗಳ ಏಕದಿನ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿರುವ ಟೀಮ್‌ ಇಂಡಿಯಾ, ಆ ಮೂಲಕ  ವೆಸ್ಟ್‌ ಇಂಡೀಸ್‌ ವಿರುದ್ಧಸತತ 12ನೇ ದ್ವಿಪಕ್ಷೀಯ ಏಕದಿನ ಕ್ರಿಕೆಟ್‌ ಸರಣಿ ಗೆದ್ದ ಸಾಧನೆ ಮಾಡಿದೆ. ಯಾವುದೇ ಒಂದು ತಂಡದ ವಿರುದ್ಧ ಅತಿಹೆಚ್ಚು ಏಕದಿನ ಸರಣಿ ಗೆದ್ದಿರುವ ನೂತನ ವಿಶ್ವ ದಾಖಲೆ ಇದಾಗಿದೆ. ಇದಕ್ಕೂ ಮೊದಲು ಪಾಕಿಸ್ತಾನ ತಂಡ ಜಿಂಬಾಬ್ವೆ ಎದುರು 11 ಸತತ ಏಕದಿನ ಸರಣಿ ಗೆದ್ದ ವಿಶ್ವ ದಾಖಲೆಯನ್ನು ಹೊಂದಿತ್ತು. ವಿಶೇಷವೆಂದರೆ 2007ರ ಬಳಿಕ ಭಾರತ ತಂಡ ಕೆರಿಬಿಯನ್ನರ ವಿರುದ್ಧ ಏಕದಿನ ಸರಣಿಯಲ್ಲಿ ಸೋಲರಿಯದ ಸರದಾರನಾಗಿ ಮುನ್ನಡೆಯುತ್ತಲೇ ಬಂದಿದೆ.

Join Whatsapp
Exit mobile version