ಬೆಂಗಳೂರು: ಆಟೋರಿಕ್ಷಾ ಚಾಲಕರ ದುಡಿಮೆಯ ಭವಿಷ್ಯಕ್ಕೆ ಮಾರಕವಾಗಿರುವ “ಕರ್ನಾಟಕ ವಿದ್ಯುತ್ ಬೈಕ್ ಟ್ಯಾಕ್ಸಿ ಯೋಜನೆ-2021” ಅನ್ನು ರದ್ದುಗೊಳಿಸುವಂತೆ ಹಾಗೂ ವೈಟ್ ಬೋರ್ಡ್ ಬೈಕ್ ಟ್ಯಾಕ್ಸಿ ಯೋಜನೆಗಳಿಗೆ ಅನುಮತಿ ನೀಡದಂತೆ ಒತ್ತಾಯಿಸಿ ಬೆಂಗಳೂರು ಆಟೋರಿಕ್ಷಾ ಚಾಲಕರ ಸಂಘಟನೆಗಳ ಒಕ್ಕೂಟದ ಸದಸ್ಯರು ಗುರುವಾರ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.
ಆದರ್ಶ ಆಟೋ ರಿಕ್ಷಾ ಮತ್ತು ಟ್ಯಾಕ್ಸಿ ಡ್ರೈವರ್ ಯೂನಿಯನ್ ಅಧ್ಯಕ್ಷ ಎಂ.ಮಂಜುನಾಥ್ ಹಾಗೂ ಆಟೋ ರಿಕ್ಷಾ ಡ್ರೈವರ್ಸ್ ಯೂನಿಯನ್ –ಸಿಐಟಿಯು ಅಧ್ಯಕ್ಷ ಸಿ.ಎನ್.ಶ್ರೀನಿವಾಸ್ ಮಾತನಾಡಿ, ಬೆಂಗಳೂರು ನಗರದಲ್ಲಿ ಆಟೋರಿಕ್ಷಾ ಸೇವೆಯು ಸುಮಾರು ಕಳೆದ 60 ವರ್ಷಗಳಿಂದ ಬಿಎಂಟಿಸಿ ನಂತರ ಬೆಂಗಳೂರು ನಗರದಲ್ಲಿ ಪ್ರತಿದಿನ 40 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರಿಗೆ ಸಾರಿಗೆ ಸೇವೆಯನ್ನು ನೀಡುತ್ತಿದೆ.
ಬೆಂಗಳೂರಿನಲ್ಲಿ ಆಟೋರಿಕ್ಷಾ ಬಹುದೊಡ್ಡ ಉದ್ಯಮವಾಗಿದ್ದು, 10 ಲಕ್ಷಕ್ಕೂ ಹೆಚ್ಚು ಜನರಿಗೆ ಉದ್ಯೋಗವಕಾಶವನ್ನು ಕೊಟ್ಟಿದೆ. ಜೊತೆಗೆ ಸರ್ಕಾರಕ್ಕೆ ಚಾಲನಾ ಪತ್ರ ನವೀಕರಣ, ಜೀವಿತಾವಧಿ ತೆರಿಗೆ, ಫಿಟ್’ನೆಸ್ ಸರ್ಟಿಫಿಕೇಟ್, ಇನ್ಸೂರೆನ್ಸ್, ರಹದಾರಿ ನವೀಕರಣ ಇದಲ್ಲದೆ ದಂಡದ ರೂಪದಲ್ಲಿ ನೇರವಾಗಿ ತೆರಿಗೆ ಪಾವತಿಸುತ್ತಿದ್ದು, ಪರೋಕ್ಷ ತೆರಿಗೆಯಾಗಿ ಹೊಸ ವಾಹನಗಳ ಖರೀದಿ, ಆಟೋರಿಕ್ಷಾಗಳಿಗೆ ಬಳಸುವ ಇಂಧನ, ಬಿಡಿಭಾಗಗಳ ಖರೀದಿ, ಪೆಟ್ರೋಲಿಯಂ ಉತ್ಪನ್ನಗಳು ಸೇರಿದಂತೆ ಇತರೆ ಉತ್ಪನ್ನಗಳು ಸೇರಿದಂತೆ ಇತರೆ ರೂಪದಲ್ಲಿ ಸರ್ಕಾರದ ಆರ್ಥಿಕತೆಗೆ ತೆರಿಗೆ ಪಾವತಿಸುವ ದೊಡ್ಡ ಉದಿಮೆಯಾಗಿದೆ. ಪ್ರಸ್ತುತ ಜಾಗತೀಕರಣ, ಡಿಜಿಟಲೀಕರಣ, ವಿದೇಶಿ ನೇರ ಬಂಡವಾಳದ ಆಕರ್ಷಣೆ ಮತ್ತು ಹೊಸ ತಾಂತ್ರಿಕ ಬದಲಾವಣೆಯಿಂದಾಗಿ ಸಾರಿಗೆ ಕ್ಷೇತ್ರದಲ್ಲಿ ಹಲವಾರು ಮಹತ್ತರ ಬದಲಾವಣೆಗಳು ಬಂದಿವೆ ಎಂದು ತಿಳಿಸಿದರು.
ಅದರಲ್ಲಿ ಮುಖ್ಯವಾಗಿ ಆಪ್ ಆಧಾರಿತ ಸಾರಿಗೆ ವ್ಯವಸ್ಥೆ ನೀಡುವ ಅಗ್ರಿಗೇಟರ್ ಕಂಪನಿಗಳು ಹೊಸದಾಗಿ ಸಾರಿಗೆ ಕ್ಷೇತ್ರಕ್ಕೆ ಬಂದಾಗ ಯದ್ವಾ ತದ್ವಾ, ಪ್ರಯಾಣಿಕರಿಗೆ, ಪ್ರಯಾಣದ ಆಫರ್’ಗಳನ್ನು ಹಾಗೂ ಚಾಲಕರಿಗೆ ಇನ್’ಸೆಂಟಿವ್ ಹೆಸರಿನಲ್ಲಿ ಆಫರ್ಗಳ ಆಮಿಷಗಳನ್ನು ಒಡ್ಡಿ ಒಟ್ಟಾರೆ ಸಾರಿಗೆ ವ್ಯವಸ್ಥೆಯಲ್ಲಿ ಸಾರಿಗೆ ಇಲಾಖೆ ಮತ್ತು ಸರ್ಕಾರದ ಹಿಡಿತ ಇಲ್ಲದಿರುವ ಹಾಗೆ ಈ ಆಫ್ ಆಧಾರಿತ ಕಂಪನಿಗಳು ವ್ಯವಸ್ಥೆಯನ್ನು ಸಂಪೂರ್ಣ ಹಾಳುಗೆಡುವಿದವು ಎಂದು ಅವರು ಆರೋಪಿಸಿದರು.
ಕಳೆದ 2 ವರ್ಷಗಳಿಂದ ಕೆಲವು ಆಪ್ ಆಧಾರಿತ ಅನಧಿಕೃತ ವೈಟ್ ಬೋರ್ಡ್ ಬೈಕ್ ಟ್ಯಾಕ್ಸಿಗಳ ಹಾವಳಿ ಬೆಂಗಳೂರು ನಗರದಲ್ಲಿ ಸಾರಿಗೆ ಇಲಾಖೆಯ ಕಣ್ಣಾವಲಿನಲ್ಲಿ ಅಕ್ರಮ ಕಾರ್ಯಾಚರಣೆ ನಡೆಸಿಕೊಂಡು ಆಟೋರಿಕ್ಷಾ ಚಾಲಕರ ದಿನದ ಸಂಪಾದನೆಯನ್ನು ಹಗಲು ದರೋಡೆ ಮಾಡಿಕೊಂಡು ಚಾಲಕರು ಜೀವನ ನಡೆಸುವುದೇ ದುಸ್ತರವನ್ನಾಗಿ ಮಾಡಿದವು. ಇದರ ವಿರುದ್ಧ ನಗರದ ಅನೇಕ ಸಂಘಟನೆಗಳು ನಿರಂತರ ಹೋರಾಟ ಮಾಡಿ, ರಸ್ತೆ ರಸ್ತೆಗಳಲ್ಲಿ ರಾಪಿಡೋ ವೈಟ್ ಬೋರ್ಡ್ ಬೈಕ್ ಟ್ಯಾಕ್ಸಿಗಳನ್ನು ಅಡ್ಡಗಟ್ಟಿ RTO ಅಧಿಕಾರಿಗಳಿಗೆ ಹಿಡಿದುಕೊಟ್ಟು ದಂಡ ಹಾಕಿಸಲಾಯಿತು. ಜೊತೆಗೆ ಇತ್ತೀಚೆಗೆ ನಡೆದ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ, ಕಳ್ಳತನ, ಹಲವಾರು ಕಿರುಕುಳ ಪ್ರಕರಣಗಳು ದಿನನಿತ್ಯ ಏರಿಕೆಯಾಗುತ್ತಿರುವುದು ಆಘಾತಕಾರಿ ವಿಷಯವಾಗಿದೆ ಎಂದು ಅವರು ಹೇಳಿದರು.
ಸರ್ಕಾರ ಒಂದು ಬೃಹತ್ ಶ್ರಮಿಕ ವರ್ಗವನ್ನು ನಿರ್ನಾಮ ಮಾಡಿ, ಹೊಸ ಉದ್ಯೋಗ ಸೃಷ್ಟಿ, ಆಧುನೀಕರಣ, ಹೊಸ ಸಾರಿಗೆ ಸಂಪರ್ಕ ವ್ಯವಸ್ಥೆಯ ಹೆಸರಿನಲ್ಲಿ ನಿರ್ನಾಮ ಮಾಡಲು ಹೊರಟಿರುವುದು ಕೇವಲ ಆಟೋರಿಕ್ಷಾ ಚಾಲಕರಲ್ಲದೇ ಅವರ ಅವಲಂಭಿತರಾಗಿರುವ, ಖಾಸಗಿ ಫೈನಾನ್ಸ್ ಕಂಪನಿಗಳು, ರಾಷ್ಟ್ರೀಕೃತ ಬ್ಯಾಂಕುಗಳು, ಮೆಕ್ಯಾನಿಕ್’ಗಳು, ಲೇತ್ ಕೆಲಸ ಮಾಡುವವರು, ಮತ್ತು ಟಿಂಕರಿಂಗ್ ಕೆಲಸಗಾರರು, ಬಿಡಿಭಾಗಗಳ ಮಾರಾಟಗಾರರು, ಮೀಟರ್ ದುರಸ್ತಿಗಾರರು, ಪೈಂಟಿಂಗ್ ಕೆಲಸಗಾರರು, ಆಯಿಲ್ ಉತ್ಪಾದಕರು ಮತ್ತು ಮಾರಾಟಗಾರರು LPG / CNG ಗ್ಯಾಸ್ ಬಂಕ್’ಗಳು ಹಾಗೂ ಸರ್ಕಾರದ ಆರ್ಥಿಕತೆ, ಜೊತೆಗೆ ಇವರೆಲ್ಲರನ್ನೂ ಅವಲಂಭಿಸಿರುವ ಅವರ ಕುಟುಂಬ ವರ್ಗದವರು ಸೇರಿದಂತೆ ಇನ್ನೂ ಹತ್ತು ಹಲವು ವರ್ಗಗಳು ಆಟೋರಿಕ್ಷಾ ಚಾಲಕರ ದುಡಿಮೆಯಿಂದಲೇ ಬದುಕುತ್ತಿರುವುದು ಕಟು ಸತ್ಯವಾಗಿರುತ್ತದೆ ಎಂದು ಅವರು ಹೇಳಿದರು.
ಇಂತಹ ಬೈಕ್ ಟ್ಯಾಕ್ಸಿಗಳಿಂದ ಈಗಾಗಲೇ ಒಂದು ಕೆಲಸದಲ್ಲಿದ್ದು, ದುಡಿಮೆಯ ಸಂಬಳ ಪಡೆಯುವ ವ್ಯಕ್ತಿಗಳು ಮತ್ತಷ್ಟು ಹಣ ಗಳಿಸುವಿಕೆಗೆ ಬೈಕ್ ಟ್ಯಾಕ್ಸಿಗಳು ಉತ್ತೇಜಿಸುತ್ತವೆ. ಜೊತೆಗೆ ಕಾಲೇಜು ವಿದ್ಯಾರ್ಥಿಗಳು ಕಾಲೇಜಿಗೆ ಗೈರುಹಾಜರಾಗಿ ತಮ್ಮ ವೈಟ್ಬೋರ್ಡ್ ಬೈಕ್’ಗಳಲ್ಲಿ ಹೆಚ್ಚು ಹಣ ಸಂಪಾದನೆ ಮಾಡಿ ಧೂಮಪಾನ, ಮಧ್ಯಪಾನ, ಡ್ರಗ್ಸ್’ನಂತಹ ಹಲವಾರು ಅನೈತಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಇದು ದೇಶದ ಯುವ ಜನರ ಭವಿಷ್ಯಕ್ಕೆ ಮಾರಕವಾಗಿದೆ ಎಂದು ಅವರು ಹೇಳಿದರು.
ಅದರ ಜೊತೆಗೆ ಸಣ್ಣಪುಟ್ಟ ಹಾಗೂ ಮಧ್ಯಮ ಕೈಗಾರಿಕಾ ಸಂಸ್ಥೆಗಳು ಮತ್ತು ವ್ಯಾಪಾರಿ ಸಂಸ್ಥೆಗಳಲ್ಲಿ 10 ಸಾವಿರದಿಂದ 15 ಸಾವಿರ ಸಂಬಳ ಪಡೆಯುವ ಒಂದು ವರ್ಗವನ್ನು ಹಣದ ದುರಾಸೆ ತೋರಿಸಿ ಈ ಬೈಕ್ ಟ್ಯಾಕ್ಸಿ ಚಾಲನೆಗೆ ಅವರನ್ನು ಸೆಳೆದು ಸಣ್ಣ ವ್ಯಾಪಾರಸ್ಥರು ಹಾಗೂ ಕೈಗಾರಿಕೆಗಳನ್ನು ಒಕ್ಕಲೆಬ್ಬಿಸಿ ರಾಜ್ಯದ ಆರ್ಥಿಕ ವ್ಯವಸ್ಥೆ ಹಾಗೂ ಸರಬರಾಜು ವ್ಯವಸ್ಥೆಯ ಮೇಲೆ ಕೆಟ್ಟ ಪರಿಣಾಮವನ್ನು ಉಂಟು ಮಾಡಲು ಈ ವೈಟ್ ಬೋರ್ಡ್ ಬೈಕ್ ಟ್ಯಾಕ್ಸಿ ಸೇವೆ ನೀಡುವ ಸಂಸ್ಥೆಗಳು ಕಾರ್ಯೊನ್ಮುಖರಾಗುತ್ತಿವೆ. ಇದರಿಂದ ಆಟೋ ಮತ್ತು ಟ್ಯಾಕ್ಸಿ ಚಾಲಕರ ಬದುಕು ಆರ್ಥಿಕ ಸಂಕಷ್ಟಗಳಿಗೆ ಸಿಲುಕಿದೆ ಎಂದು ಅವರು ಹೇಳಿದರು.
ಆದ್ದರಿಂದ ಸರ್ಕಾರವು ಕರ್ನಾಟಕ ವಿದ್ಯುತ್ ಬೈಕ್ ಟ್ಯಾಕ್ಸಿ ಯೋಜನೆ ರದ್ದುಗೊಳಿಸಬೇಕು ಹಾಗೂ ವೈಟ್ ಬೋರ್ಡ್ ಬೈಕ್ ಟ್ಯಾಕ್ಸಿ ಯೋಜನೆಗಳಿಗೆ ಅನುಮತಿ ನೀಡಬಾರದು ಎಂದು ಅವರು ಆಗ್ರಹಿಸಿದರು.
ಅದರ ಬದಲು ಆಟೋ ರಿಕ್ಷಾ ಚಾಲಕರಿಗೆ ಅನುಕೂಲವಾಗುವಂತೆ ಎಲೆಕ್ಟ್ರಿಕ್ ಆಟೋರಿಕ್ಷಾಗಳಿಗೆ ಶೇಕಡ 50% ಸಹಾಯಧನ (ಸಬ್ಸಿಡಿ) ನೀಡಿ ಈ ಮುಖಾಂತರ ಟ್ರಾಫಿಕ್ ಸಮಸ್ಯೆಗೆ ಹಾಗೂ ಮಾಲಿನ್ಯವನ್ನು ನಿಯಂತ್ರಣಕ್ಕೆ ತರಬಹುದು. ಈ ಬೇಡಿಕೆಗಳನ್ನು ಈಡೇರಿಸದಿದ್ದರೆ ಮುಂದಿನ ದಿನಗಳಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ಹಮ್ಮಿಕೊಳ್ಳಲಾಗುವುದು ಎಂದು ಎಂ.ಮಂಜುನಾಥ್ ಹಾಗೂ ಸಿ.ಎನ್.ಶ್ರೀನಿವಾಸ್ ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಪೀಸ್ ಆಟೋ ಯೂನಿಯನ್ ರಘು ನಾರಾಯಣಗೌಡ, ರಾಷ್ಟ್ರೀಯ ಚಾಲಕರ ಒಕ್ಕೂಟದ ಅಧ್ಯಕ್ಷ ಗಂಡಸಿ ಸದಾನಂದ ಸ್ವಾಮಿ, ಸಂಪತ್, ಚಂದ್ರಶೇಖರ್, ಮುಹಮ್ಮದ್, ಮಾಯಾಲಗ, ಕುಮಾರ್, ಜವರೇಗೌಡ, ಸೇರಿದಂತೆ ಅನೇಕ ಆಟೋ ಚಾಲಕರ ಸಂಘದ ಅಧ್ಯಕ್ಷರು ಭಾಗವಹಿಸಿದ್ದರು.