ಬೆಳಗಾವಿ: ಅನಧಿಕೃತವಾಗಿ ನಿರ್ಮಿಸಲಾಗಿದೆ ಎಂದು ಆರೋಪಿಸಿ ಬೆಳಗಾವಿಯ ಫಾತಿಮಾ ಮಸ್ಜಿದ್’ಗೆ ಬೆಳಗಾವಿ ಮಹಾನಗರ ಪಾಲಿಕೆ ಅಧಿಕಾರಿಗಳು ಬೀಗ ಜಡಿದಿದ್ದಾರೆ.
ಮುಂದಿನ ಆದೇಶದವರೆಗೆ ಮಸೀದಿ ಸೀಲ್ ಮಾಡಲಾಗಿದೆ.
ಬೆಳಗಾವಿಯ ಸಾರಥಿ ನಗರದ ವಸತಿ ನಿವೇಶನದಲ್ಲಿ ಫಾತಿಮಾ ಮಸೀದಿ ಇದೆ. ಇಲ್ಲಿ ಸ್ಥಳೀಯ ಮುಸ್ಲಿಮರು ನಮಾಝ್ ನಿರ್ವಹಿಸುತ್ತಿದ್ದರು. ಆದರೆ ಈ ಮಸೀದಿಯನ್ನು ಅನಧಿಕೃತವಾಗಿ ನಿರ್ಮಿಸಲಾಗಿದೆ ಎಂಬ ಆರೋಪ ಕೇಳಿ ಬಂದಿತ್ತು.
ಮಸೀದಿ ವಿರುದ್ಧ ಶ್ರೀರಾಮಸೇನೆ ಕಾರ್ಯಕರ್ತರು ಮತ್ತು ಬಿಜೆಪಿ ನಾಯಕ ಸಂಜಯ್ ಪಾಟೀಲ್ ಮತ್ತಿತರ ಸಂಘಪರಿವಾರದ ಕಾರ್ಯಕರ್ತರು ಡಿಸಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆಯು ಫಾತಿಮಾ ಮಸೀದಿಯಲ್ಲಿ ಧಾರ್ಮಿಕ ಚಟುವಟಿಕೆ ನಿಲ್ಲಿಸುವಂತೆ ನೋಟಿಸ್ ನೀಡಿತ್ತು.
ಈ ಮಧ್ಯೆ ವಕ್ಫ್ ಬೋರ್ಡ್‌ಗೆ ಕೂಡಲೇ ಮಸೀದಿಗೆ ಬೀಗ ಹಾಕುವಂತೆ ನೋಟಿಸ್ ನೀಡಲಾಗಿತ್ತು. ಪಾಲಿಕೆ ಆಯುಕ್ತರು ನೋಟಿಸ್ ನೀಡುತ್ತಿದ್ದಂತೆ ವಕ್ಫ್ ಕಮಿಟಿಯವರು ಮಸೀದಿಗೆ ಬೀಗ ಹಾಕಿದ್ದಾರೆ. ಇನ್ನೂ ಮಸೀದಿ ಮುಂಭಾಗದಲ್ಲಿ ಮುಂಜಾಗ್ರತಾ ಕ್ರಮವಾಗಿ ಕೆಎಸ್’ಆರ್’ಪಿ ತುಕಡಿ ನಿಯೋಜನೆ ಮಾಡಲಾಗಿದೆ.