ಆಸ್ಟ್ರೇಲಿಯನ್ ಓಪನ್‌ | ಮಿಶ್ರ ಡಬಲ್ಸ್‌’ನಲ್ಲಿ ಫೈನಲ್‌ ಪ್ರವೇಶಿಸಿದ ರೋಹನ್‌ ಬೋಪಣ್ಣ – ಸಾನಿಯಾ ಮಿರ್ಜಾ

Prasthutha|

ಭಾರತದ ರೋಹನ್‌ ಬೋಪಣ್ಣ – ಸಾನಿಯಾ ಮಿರ್ಜಾ ಜೋಡಿ,  ವರ್ಷದ ಮೊದಲ ಗ್ರ್ಯಾನ್‌ ಸ್ಲಾಮ್‌, ಆಸ್ಟ್ರೇಲಿಯ ಓಪನ್‌‌  ಟೆನಿಸ್‌ ಟೂರ್ನಿಯ ಮಿಶ್ರ ಡಬಲ್ಸ್‌ ವಿಭಾಗದಲ್ಲಿ ಫೈನಲ್‌ ಪ್ರವೇಶಿಸಿದೆ.

- Advertisement -

ಬುಧವಾರ ನಡೆದ ಜಿದ್ದಾಜಿದ್ದಿನ ಸೆಮಿಫೈನಲ್‌ ಪಂದ್ಯದಲ್ಲಿ ಶ್ರೇಯಾಂಕ ರಹಿತ ಭಾರತದ ಜೋಡಿ, ಮೂರನೇ ಶ್ರೇಯಾಂಕದ ನೀಲ್ ಸ್ಕುಪ್ಸ್ಕಿ ಮತ್ತು ದೇಸಿರೇ ಕ್ರೌಜಿಕ್ ಅವರನ್ನು  ಅಂತಿಮ ನಾಲ್ಕರ ಘಟ್ಟದ ಪಂದ್ಯದಲ್ಲಿ ಮಣಿಸಿತು.

ಮಾರ್ಗರೆಟ್‌ ಕೋರ್ಟ್‌ ಅರೆನಾದಲ್ಲಿ ಒಂದು ಗಂಟೆ 52 ನಿಮಿಷಗಳ ಕಾಲ ನಡೆದ ರೋಚಕ ಸೆಮಿಫೈನಲ್‌ ಹೋರಾಟದಲ್ಲಿ 7-6(5) 6-7(5) 10-6 ಸೆಟ್‌’ಗಳ ಅಂತರದಲ್ಲಿ ಬೋಪಣ್ಣ – ಮಿರ್ಜಾ ಜೋಡಿ ಗೆಲುವು ಸಾಧಿಸಿತು.

- Advertisement -

ಶನಿವಾರ ನಡೆಯುವ ಪ್ರಶಸ್ತಿ ಸುತ್ತಿನ ಹೋರಾಟದಲ್ಲಿ, ಆಸ್ಟ್ರೇಲಿಯಾದ ಒಲಿವಿಯಾ ಗಡೆಕಿ – ಮಾರ್ಕ್ ಪೋಲ್ಮನ್ಸ್ ಮತ್ತು ಲೂಯಿಸಾ ಸ್ರೆಫಾನಿ – ಪಫೆಲ್ ಮ್ಯಾಟೋಸ್ ನಡುವಿನ ಪಂದ್ಯದ ವಿಜೇತರನ್ನು ಎದುರಿಸಲಿದ್ದಾರೆ.

ವೃತ್ತಿ ಜೀವನದ ಕೊನೆಯ ಗ್ರ್ಯಾನ್‌ ಸ್ಲಾಮ್‌ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿರುವ ಭಾರತದ ಸಾನಿಯಾ ಮಿರ್ಜಾ, ಮೆಲ್ಬೋರ್ನ್‌’ನಲ್ಲಿ 7ನೇ ಗ್ರ್ಯಾಂಡ್‌ ಸ್ಲಾಮ್‌ ಗೆಲುವಿನೊಂದಿಗೆ ಸ್ಮರಣೀಯ ವಿದಾಯ ಹೇಳಲು ಸಜ್ಜಾಗಿದ್ದಾರೆ. ಆಸ್ಟ್ರೇಲಿಯ ಓಪನ್‌‌  ಟೂರ್ನಿಯಲ್ಲಿ 2009ರಲ್ಲಿ ಮಿಶ್ರ ಡಬಲ್ಸ್‌ ವಿಭಾಗದಲ್ಲಿ ಮಹೇಶ್‌ ಭೂಪತಿ ಮತ್ತು 2010ರಲ್ಲಿ ಮಾರ್ಟಿನಾ ಹಿಂಗಿಸ್ ಜೊತೆಗೂಡಿ  ಮಹಿಳಾ ಡಬಲ್ಸ್ ಕಿರೀಟ ಗೆದ್ದು ಸಂಭ್ರಮಿಸಿದ್ದರು.

ಈ ಬಾರಿ ಕಝಕಿಸ್ತಾನ್‌’ನ ವಿಶ್ವದ ನಂ. 11 ಆಟಗಾತಿ ಅನ್ನಾ ಡ್ಯಾನಿಲಿನಾ ಜೊತೆಗೂಡಿ ಮಹಿಳಾ ಡಬಲ್ಸ್‌’ನಲ್ಲಿ ಆಡಿದ್ದ ಸಾನಿಯಾ, ಎರಡನೇ ಸುತ್ತಿನಲ್ಲಿ ಹೊರಬಿದ್ದಿದ್ದರು.

Join Whatsapp