ಕಾರು ಅಪಘಾತ; ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಆಂಡ್ರ್ಯೂ ಸೈಮಂಡ್ಸ್ ಸಾವು

Prasthutha|

ಕ್ರಿಕೆಟ್‌ ಜಗತ್ತು ಕಂಡ ಸ್ಫೋಟಕ ಆಲ್‌ರೌಂಡರ್‌ಗಳಲ್ಲಿ ಒಬ್ಬರಾದ ಆಸ್ಟ್ರೇಲಿಯಾದ ಆಂಡ್ರ್ಯೂ ಸೈಮಂಡ್ಸ್‌ ಕಾರು ಅಪಘಾತದಲ್ಲಿ ಮೃತಪಟ್ಟಿದ್ದಾರೆ.

- Advertisement -

ಶನಿವಾರ ರಾತ್ರಿ ಕ್ವೀನ್ಸ್‌ಲ್ಯಾಂಡ್‌ನ ಟೌನ್ಸ್‌ ವಿಲ್ಲೆಯಿಂದ 50 ಕಿಲೋಮೀಟರ್ ದೂರದಲ್ಲಿರುವ ಹಾರ್ವೆ ರೇಂಜ್ ನಗರದಲ್ಲಿ ಅಪಘಾತ ಸಂಭವಿಸಿದೆ. ಸೈಮಂಡ್ಸ್ ಅವರು ಚಲಾಯಿಸುತ್ತಿದ್ದ ಕಾರು, ನಿಯಂತ್ರಣ ಕಳೆದುಕೊಂಡು ರಸ್ತೆಯಿಂದ ಪಕ್ಕಕ್ಕೆ ಸರಿದು ಪಲ್ಟಿಯಾಗಿದ್ದು, ಪರಿಣಾಮ ಮಾಜಿ ಕ್ರಿಕೆಟಿಗ ಸಾವನ್ನಪ್ಪಿದ್ದಾರೆ.

ಮೂಲಗಳ ಪ್ರಕಾರ, ಅಪಘಾತದ ವೇಳೆ ಸೈಮಂಡ್ಸ್‌ ಒಬ್ಬರೇ ಕಾರಿನಲ್ಲಿದ್ದರು. ದುರ್ಘಟನೆ ನಡೆದ ತಕ್ಷಣ ತುರ್ತು ಸಿಬ್ಬಂದಿ ಸ್ಥಳಕ್ಕೆ ಧಾವಿಸಿದರೂ ಅವರು ಗಂಭೀರವಾಗಿ ಗಾಯಗೊಂಡ ಪರಿಣಾಮ ಕೊನೆಯುಸಿರೆಳೆದರು ಎಂದು ಕ್ವೀನ್ಸ್ ಲ್ಯಾಂಡ್ ಪೊಲೀಸರು ಮಾಹಿತಿ ನೀಡಿದ್ದಾರೆ.

- Advertisement -

46 ವರ್ಷದ ಸೈಮಂಡ್ಸ್‌ ಆಸ್ಟ್ರೇಲಿಯಾ ಪರ 26 ಟೆಸ್ಟ್‌ ಪಂದ್ಯಗಳನ್ನು ಆಡಿದ್ದು, 1462 ರನ್ ಗಳಿಸಿದ್ದು, 24 ವಿಕೆಟ್‌ಗಳನ್ನು ಪಡೆದಿದ್ದಾರೆ. 198 ಏಕದಿನ ಪಂದ್ಯಗಳ ಮೂಲಕ 5088 ರನ್ ಗಳಿಸಿದ್ದು 133 ವಿಕೆಟ್ ಪಡೆದಿದ್ದಾರೆ.

ಎರಡು ಬಾರಿ ಆಸ್ಟ್ರೇಲಿಯಾ ಏಕದಿನ ವಿಶ್ವಕಪ್ ಕಿರೀಟ ಗೆದ್ದ ವೇಳೆ [ 2003 ಮತ್ತು 2007] ತಂಡದ ಭಾಗವಾಗಿದ್ದರು.

ಎರಡು ತಿಂಗಳ ಹಿಂದೆ ಕ್ರಿಕೆಟ್‌ ದಂತಕಥೆ ಶೇನ್‌ ವಾರ್ನ್‌, ಥಾಯ್ಲೆಂಡ್’ನಲ್ಲಿ ಹೃದಯಾಘಾತದಿಂದ ನಿಧನ ಹೊಂದಿದ್ದರು.

ಮಂಕಿ ಗೇಟ್’ ಪ್ರಕರಣ

ಸೈಮಂಡ್ಸ್ ಅವರ ವೃತ್ತಿಜೀವನದಲ್ಲಿ ಮರೆಯಲಾಗದ ಘಟನೆಗೆ 2008ರ ಭಾರತದ ವಿರುದ್ಧ ಸಿಡ್ನಿ ಟೆಸ್ಟ್ ಸಾಕ್ಷಿಯಾಗಿತ್ತು. ಟೆಸ್ಟ್ ಪಂದ್ಯದ ಅಂತಿಮ ದಿನ ಭಾರತದ ಖ್ಯಾತ ಸ್ಪಿನ್ನರ್ ಹರ್ಭಜನ್ ಸಿಂಗ್, ಸೈಮಂಡ್ಸ್ ಅವರನ್ನು ‘ಮಂಕಿ’ ಎಂದು ಕರೆದು ಅವಮಾನಿಸಿದ್ದಾಗಿ ಆರೋಪಿಸಲಾಗಿತ್ತು.
ಎರಡೂ ತಂಡಗಳ ನಡುವೆ ತೀವ್ರ ವಾಗ್ವಾದಕ್ಕೆ ಕಾರಣವಾಗಿದ್ದ ‘ಮಂಕಿ ಗೇಟ್ ಪ್ರಕರಣ’ವು ಕ್ರಿಕೆಟ್ ಇತಿಹಾಸದಲ್ಲೇ ಕಪ್ಪು ಚುಕ್ಕೆಯಾಗಿದೆ.

ಆಸ್ಟ್ರೇಲಿಯಾದ ನಾಯಕನಾಗಿದ್ದ ರಿಕಿ ಪಾಂಟಿಂಗ್, ಸಿಡ್ನಿ ಟೆಸ್ಟ್ ಪಂದ್ಯದ ಅಂಪೈರ್’ಗಳಾಗಿದ್ದ ಸ್ಟೀವ್ ಬಕ್ನರ್ ಮತ್ತು ಮಾರ್ಕ್ ಬೆನ್ಸನ್ ಅವರಿಗೆ ಈ ಕುರಿತು ದೂರು ಸಲ್ಲಿಸಿದ್ದರು. ಬಳಿಕ ಮೂರು ಪಂದ್ಯಗಳಿಂದ ಹರ್ಭಜನ್ ಅವರನ್ನು ಅಮಾನತುಗೊಳಿಸಲಾಗಿತ್ತು. ಇದರಿಂದಾಗಿ ಆಸ್ಟ್ರೇಲಿಯಾ ಪ್ರವಾಸವನ್ನು ಅರ್ಧದಲ್ಲೇ ಮೊಟಕುಗೊಳಿಸಿ ಟೀಮ್ ಇಂಡಿಯಾ, ತವರಿಗೆ ಮರಳುವ ಬೆದರಿಕೆ ಒಡ್ಡಿತ್ತು.

ಸಿಡ್ನಿ ಟೆಸ್ಟ್‌ನಲ್ಲಿ ಅಮೋಘ 162 ರನ್‌ಗಳನ್ನು ಗಳಿಸಿದ್ದ ಸೈಮಂಡ್ಸ್, ಆಸ್ಟ್ರೇಲಿಯಾದ 122 ರನ್‌ಗಳ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

Join Whatsapp