ಆಸೀಸ್‌ ವಿರುದ್ಧ ಅಂತಿಮ ಓವರ್‌ನಲ್ಲಿ ಎರಡು ಕ್ಯಾಚ್‌ ಜೊತೆ ಮ್ಯಾಚ್‌ ಕೈಚೆಲ್ಲಿದ ವೆಸ್ಟ್‌ ಇಂಡೀಸ್‌

Prasthutha|

ಆಸ್ಟ್ರೇಲಿಯಾ ವಿರುದ್ಧದ 2 ಟಿ20 ಪಂದ್ಯಗಳ ಮೊದಲನೇ ಪಂದ್ಯದಲ್ಲಿ ವೆಸ್ಟ್‌ ಇಂಡೀಸ್‌, ತನ್ನ ಸ್ವಯಂಕೃತ ತಪ್ಪಿನಿಂದ ಪಂದ್ಯವನ್ನು ಕಳೆದುಕೊಂಡು ನಿರಾಸೆ ಅನುಭವಿಸಿದೆ. ತೀವ್ರ ಕುತೂಹಲ ಕೆರಳಿಸಿದ್ದ ಅಂತಿಮ ಓವರ್‌ನಲ್ಲಿ ಕೆರಬಿಯನ್‌ ಕ್ಷೇತ್ರರಕ್ಷಕರು ಎರಡು ಸುಲಭ ಕ್ಯಾಚ್‌ಗಳನ್ನು ಕೈಚೆಲ್ಲುವುದರ ಜೊತೆಗೆ ಪಂದ್ಯವನ್ನು ಕೈ ಚೆಲ್ಲಿದರು.

- Advertisement -

ಓವಲ್‌ ಮೈದಾನದಲ್ಲಿ ಮೊದಲು ಬ್ಯಾಟ್‌ ಮಾಡಿದ್ದ ವೆಸ್ಟ್‌ ಇಂಡೀಸ್‌ ನಿಗಧಿತ 20 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟದಲ್ಲಿ 145 ರನ್‌ಗಳಿಸಿತ್ತು. ಚೇಸಿಂಗ್‌ ವೇಳೆ ಆಸ್ಟೇಲಿಯಾ 19 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟದಲ್ಲಿ 135 ರನ್‌ಗಳಿಸಿತ್ತು. ಕುತೂಹಲ ಘಟ್ಟಕ್ಕೆ ತಲುಪಿದ್ದ ಪಂದ್ಯದ ಅಂತಿಮ 6 ಎಸೆತಗಳಲ್ಲಿ  ವಿಶ್ವ ಚಾಂಪಿಯನ್ನರ ಗೆಲುವಿಗೆ 11 ರನ್‌ಗಳಾಗತ್ಯವಿತ್ತು

ಶೆಲ್ಡನ್ ಕಾಟ್ರೆಲ್ ಎಸೆದ 20ನೇ ಓವರ್‌ನ ಮೊದಲ ಎಸೆತವನ್ನು ಮ್ಯಾಥ್ಯೂ ವೇಡ್‌ ಬೌಂಡರಿಗಟ್ಟಿದ್ದರು. ಎರಡನೇ ಎಸೆತವನ್ನು ವೇಡ್‌ ಡೀಪ್‌ ಕವರ್‌ ಕಡೆಗೆ ಬಾರಿಸಿದ್ದರು. ಕ್ಷೇತ್ರರಕ್ಷಣೆಯಲ್ಲಿದ್ದ ರೇಮನ್ ರೀಫರ್ ಸುಲಭ ಕ್ಯಾಚನ್ನು ಕೈಚೆಲ್ಲಿದ ಪರಿಣಾಮ ಆಸೀಸ್‌ ಬ್ಯಾಟರ್‌ಗಳು 2 ರನ್‌ ಪಡೆದರು. ನಾಲ್ಕನೇ ಎಸೆತವನ್ನು ಎದುರಿಸಿದ ಮಿಚೆಲ್‌ ಸ್ಟಾರ್ಕ್‌, ಬ್ಯಾಟ್‌ನಿಂದ ಟಾಪ್‌ ಎಡ್ಜ್‌ ಆಗಿ ಚೆಂಡು ಶಾರ್ಟ್‌ ಥರ್ಡ್‌ ಮ್ಯಾನ್‌ ಕಡೆ ಚಿಮ್ಮಿತ್ತು. ಈ ವೇಳೆ ಚೆಂಡು ಬರುವುದನ್ನು ಅಂದಾಜಿಸುವಲ್ಲಿ ವಿಫಲರಾದ ಕೈಲ್‌ ಮೇಯರ್ಸ್‌, ಅನಾಯಾಸವಾಗಿ ಹಿಡಿಯಬಹುದಾಗಿದ್ದ ಕ್ಯಾಚನ್ನು ಕೈಚೆಲ್ಲಿದರು.

- Advertisement -

ನಿರ್ಣಾಯಕ ಘಟ್ಟದಲ್ಲೂ ಕಳಪೆ ಕ್ಷೇತ್ರರಕ್ಷಣೆಯ ಲಾಭ ಪಡೆದ ಆಸ್ಟ್ರೇಲಿಯಾ, ಇನ್ನೂ ಒಂದು ಎಸೆತ ಬಾಕಿ ಇರುವಂತೆಯೇ 7 ವಿಕೆಟ್‌ ನಷ್ಟದಲ್ಲಿ 146 ರನ್‌ಗಳಿಸಿ ಗೆಲುವಿನ ನಿಟ್ಟುಸಿರುಬಿಟ್ಟಿತು. ಆಸೀಸ್‌ ಪರ ನಾಯಕ ಆರೋನ್‌ ಫಿಂಚ್‌ ಅರ್ಧಶತಕ (58 ರನ್‌) ಗಳಿಸಿದರೆ, ಮ್ಯಾಥ್ಯೂ ವೇಡ್‌ 39 ರನ್‌ಗಳಿಸಿ ಅಜೇಯರಾಗುಳಿದರು.

ಟಿ20 ಸರಣಿಯ ಎರಡನೇ ಮತ್ತು ಅಂತಿಮ ಪಂದ್ಯ ಶುಕ್ರವಾರ ಬ್ರಸ್ಬೇನ್‌ನಲ್ಲಿ ನಡೆಯಲಿದೆ.

Join Whatsapp