ತುಮಕೂರು: ಸಚಿವರು, ಶಾಸಕರನ್ನು ‘ಹನಿಟ್ರ್ಯಾಪ್’ಗೆ ಬೀಳಿಸುವ ಯತ್ನ ವಿಚಾರ ರಾಜ್ಯ ಹಾಗೂ ರಾಷ್ಟ್ರ ರಾಜಕಾರಣದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿರುವಂತೆಯೇ ಸಹಕಾರ ಸಚಿವ ಕೆ.ಎನ್. ರಾಜಣ್ಣ ಮಂಗಳವಾರ ಮತ್ತಷ್ಟು ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆ. ಎನ್. ರಾಜಣ್ಣ, ನನಗೆ ಎರಡು ಬಾರಿ ಹನಿಟ್ರ್ಯಾಪ್ ಯತ್ನ ನಡೆದಿದ್ದು, ಬ್ಲೂ ಜೀನ್ಸ್ ಹಾಕಿಕೊಂಡಿದ್ದ ಒಬ್ಬಳು ಹುಡುಗಿ 2 ಸಲ ಬಂದಿದ್ದಳು. ಮೊದಲ ಬಾರಿ ಬಂದಾಗ ಯಾರು ಎಂದು ಹೇಳಿರಲಿಲ್ಲ. ‘ಸರ್, ನಿಮ್ಮತ್ರ ಬಹಳ ಪರ್ಸನಲ್ಲಾಗಿ ಗುಟ್ಟಾಗಿ ಮಾತನಾಡಬೇಕು’ ಎಂದಿದ್ದಳು. ಎರಡನೇ ಸಲ ಬಂದಾಗ, ‘ಹೈಕೋರ್ಟ್ ವಕೀಲೆ’ ಅಂತಾ ಹೇಳಿಕೊಂಡಿದ್ದಳು ಎಂದು ಹನಿಟ್ರ್ಯಾಪ್ ಕಥೆಯನ್ನು ಬಿಚ್ಚಿಟ್ಟರು.
ಹನಿಟ್ರ್ಯಾಪ್ ಮಾಡಲು ನನ್ನ ಮನೆಗೆ ಎರಡು ಸಲ ಒಬ್ಬನೇ ಹುಡುಗ ಹುಡುಗಿಯನ್ನು ಕರೆದುಕೊಂಡು ಬಂದಿದ್ದನು. ನನಗೆ ಪೋಟೋ ತೋರಿಸಿದರೆ ಗುರುತು ಹಿಡಿಯುತ್ತೇನೆ ಎಂದರು.
ಮನೆಯಲ್ಲಿ ಸಿಸಿಟಿವಿ ಇರಲಿಲ್ಲ. ಹಾಗಾಗಿ ಸಿಸಿಟಿವಿ ವಿಡಿಯೋ ನಮ್ಮ ಬಳಿ ಇಲ್ಲ. ಯಾರು ಬಂದು ಹೋಗಿದ್ದಾರೋ ಅವರ ಮೇಲೆ ಕ್ರಮ ಕೈಗೊಳ್ಳುವಂತೆ ಕೇಳಿಕೊಂಡಿದ್ದೇನೆ. ಅಪರಿಚಿತರು ಅಂತ ದೂರಿನಲ್ಲಿ ದಾಖಲಿಸಿದ್ದೇನೆ ಎಂದು ಮಾಹಿತಿ ನೀಡಿದರು.
ಹಲವು ಕಾರ್ಯಕ್ರಮಗಳಲ್ಲಿ ಬ್ಯುಸಿ ಇದ್ದ ಕಾರಣ ದೂರು ನೀಡಿರಲಿಲ್ಲ. ಇಲ್ಲಿಯವರೆಗೂ ಯಾಕೆ ದೂರು ನೀಡಿಲ್ಲ ಅಂತಾ ಸಿಎಂ ಕೇಳಿದ್ರು, ಇಂದು ದೂರು ನೀಡುತ್ತೇನೆ ಅಂತಾ ಅವರಿಗೆ ಹೇಳಿದ್ದೇನೆ. ಇಂದು ಬೆಳಗ್ಗೆಯಿಂದ ಕುಳಿತು ಮೂರು ಪುಟಗಳ ದೂರು ಬರೆದಿದ್ದು, ಗೃಹ ಸಚಿವ ಡಾ.ಜಿ. ಪರಮೇಶ್ವರ್ ಎಲ್ಲೇ ಇದ್ರೂ ಹುಡುಕಿಕೊಂಡು ಹೋಗಿ ದೂರು ನೀಡುತ್ತೇನೆ. ದೂರು ನೀಡಿದ ಬಳಿಕ ಎಫ್ ಐಆರ್ ಆಗುತ್ತದೆ. ಆಗ ದಾಖಲೆಗಳು ಬಹಿರಂಗವಾಗುತ್ತವೆ ಎಂದರು.