ಪಟ್ನಾ: ಚಲಿಸುತ್ತಿದ್ದ ರೈಲಿನ ಕಿಟಕಿಯಿಂದ ಮೊಬೈಲ್ ಫೋನ್ ಕದಿಯಲು ಯತ್ನಿಸಿದ ಕಳ್ಳನೊಬ್ಬನನ್ನು ಕಿಟಕಿಯ ಮೂಲಕ ಹಿಡಿದು ಬೋಗಿಗೆ ಜೋತು ಹಾಕಿದ ಘಟನೆ ಬಿಹಾರದ ಬೇಗುಸರಾಯ್ ನಲ್ಲಿ ನಡೆದಿದೆ.
ರೈಲು ಬೆಗುಸರಾಯ್ ನಿಂದ ಖಗರಿಯಕ್ಕೆ ತೆರಳುತ್ತಿದ್ದ ರೈಲಿನಲ್ಲಿ ಈ ಘಟನೆ ನಡೆದಿದೆ. ಸಾಹೇಬ್ ಪುರ ಕಮಲ್ ನಿಲ್ದಾಣದ ಬಳಿ ಸತ್ಯಮ್ ಕುಮಾರ್ ಎಂಬಾತ ಕಳ್ಳತನಕ್ಕೆ ಯತ್ನಿಸಿದ್ದ. ನಿಲ್ದಾಣದಿಂದ ಹೊರಡುವ ರೈಲಿನ ಕಿಟಕಿಯಲ್ಲಿ ತನ್ನ ಕೈಯನ್ನು ಇರಿಸಿ ಪ್ರಯಾಣಿಕನ ಮೊಬೈಲ್ ಅನ್ನು ಕಸಿದುಕೊಳ್ಳಲು ಪ್ರಯತ್ನಿಸಿದ ತಕ್ಷಣ, ವ್ಯಕ್ತಿಯ ಕೈಗಳನ್ನು ಪ್ರಯಾಣಿಕರು ಕಿಟಕಿಯೊಳಗಿಂದ ಎಳೆದು ಹಿಡಿದುಕೊಂಡಿದ್ದರು. ಹೀಗಾಗಿ, ರೈಲು ಚಲಿಸುತ್ತಿದ್ದರೂ ಆತ ಕಿಟಕಿಯಲ್ಲಿ ನೇತಾಡಿ ಒದ್ದಾಡುವಂತಾಯಿತು. ಬಿಟ್ಟು ಬಿಡುವಂತೆ ಆತ ಎಷ್ಟೇ ಕೇಳಿಕೊಂಡರೂ, ಪ್ರಯಾಣಿಕರು ಆತನನ್ನು ಮುಂದಿನ ನಿಲ್ದಾಣದಲ್ಲಿ ಪೊಲೀಸರಿಗೆ ಒಪ್ಪಿಸಿದರು.
ಸುಮಾರು 15 ಕಿಲೋಮೀಟರ್ ವರೆಗೆ ಆತ ನೇತಾಡುತ್ತಲೇ ಇದ್ದ ಎನ್ನಲಾಗಿದೆ. ರೈಲು ಖಗರಿಯಕ್ಕೆ ಬಂದ ಕೂಡಲೇ ಅತನನ್ನು ಪೊಲೀಸರಿಗೆ ಹಿಡಿದುಕೊಡಲಾಗಿದೆ. ಪ್ರಕರಣ ದಾಖಲಾದ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.
ಪ್ರಯಾಣಿಕರು ರೈಲುಗಳಿಂದ ಕಳ್ಳನನ್ನು ನೇತುಹಾಕುವ ವೀಡಿಯೊ ಮಾಡಿದ್ದು, ಅದು ನಂತರ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.