Home ಟಾಪ್ ಸುದ್ದಿಗಳು ದಲಿತ ಯುವಕನಿಗೆ ಹಲ್ಲೆ ನಡೆಸಿ ಆತ್ಮಹತ್ಯೆಗೆ ತಳ್ಳಿದ್ದು ಮನುವಾದಿ ಸರ್ಕಾರದ ಮನಸ್ಥಿತಿಗೆ ಪೂರಕ: ಪುಟ್ಟನಂಜಯ್ಯ

ದಲಿತ ಯುವಕನಿಗೆ ಹಲ್ಲೆ ನಡೆಸಿ ಆತ್ಮಹತ್ಯೆಗೆ ತಳ್ಳಿದ್ದು ಮನುವಾದಿ ಸರ್ಕಾರದ ಮನಸ್ಥಿತಿಗೆ ಪೂರಕ: ಪುಟ್ಟನಂಜಯ್ಯ

ಬೆಂಗಳೂರು: ದಲಿತ ಯುವಕನನ್ನು ಮರಕ್ಕೆ ಕಟ್ಟಿ ಹಲ್ಲೆ ಮಾಡಿ, ಜಾತಿ ಹಿಡಿದು ನಿಂಧಿಸಿ ಅವಮಾನಿಸಿ ಆತ್ಮಹತ್ಯೆಗೆ ತಳ್ಳಿದ್ದು ಮನುವಾದಿ ಸರ್ಕಾರದ ಮನಸ್ಥಿತಿಗೆ ಪೂರಕವಾಗಿಯೇ ಇದೆ ಎಂದು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ(SDPI) ರಾಜ್ಯ ಉಪಾಧ್ಯಕ್ಷರಾದ ದೇವನೂರ ಪುಟ್ಟನಂಜಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

 ಕೋಲಾರದಲ್ಲಿ ಸವರ್ಣೀಯರನ್ನು ಬೈಕಿನಲ್ಲಿ ಓವರ್ ಟೇಕ್ ಮಾಡಿದ ಎಂಬ ಕ್ಷುಲ್ಲಕ ಕಾರಣವನ್ನು ಮುಂದಿಟ್ಟುಕೊಂಡು ಜಾತಿ ನಿಂದನೆ ಮಾಡಿ, ಮರಕ್ಕೆ ಕಟ್ಟಿ ಥಳಿಸಿ, ಅವಮಾನಿಸಿ ಉದಯ್ ಕಿರಣ್ ಎಂಬ ದಲಿತ ಯುವಕನನ್ನು ಆತ್ಮಹತ್ಯೆಗೆ ದೂಡಿದ್ದಾರೆ. ಹಾಗೆ ನೋಡಿದರೆ ಈ ಕ್ರೌರ್ಯ ಬಿಜೆಪಿಯ ಮನುವಾದಿ ಆಡಳಿತಕ್ಕೆ ಪೂರಕವಾಗಿಯೇ ನಡೆದಿದೆ ಎಂದು ಅವರು ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.

ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ಜಾತಿ ಎಂಬ ವಿಷಕಾರಿ ಪದ್ಧತಿ ಅಳಿಯದೇ ಇರುವುದು ದುರಂತ. ಅದನ್ನು ನಾಶ ಮಾಡಬೇಕಾದ ಸರ್ಕಾರಗಳೇ ತಮ್ಮ ರಾಜಕೀಯ ಉದ್ದೇಶಗಳಿಗಾಗಿ ಅದನ್ನು ಪೋಷಿಸಿಕೊಂಡು ಬರುತ್ತಿರುವುದೇ ಇದಕ್ಕೆ ಕಾರಣ ಎಂದು ಅವರು ಹೇಳಿದ್ದಾರೆ. ಅಧಿಕಾರದಲ್ಲಿರುವ ಬಿಜೆಪಿ ಪಕ್ಷ ಬ್ರಾಹ್ಮಣ್ಯವನ್ನು ಶಿರಸಾವಹಿಸಿ ಒಪ್ಪಿಕೊಂಡಿರುವ ಪಕ್ಷ. ಹಾಗಾಗಿ ಮನುವಾದ ಮತ್ತು ಜಾತಿ ಕ್ರೌರ್ಯ ಇನ್ನಷ್ಟು ಹೆಚ್ಚಾಗುತ್ತಿದೆ ಎಂದು ಬಿಜೆಪಿ ಮತ್ತು ಅದರ ಆಡಳಿತವನ್ನು ಪುಟ್ಟನಂಜಯ್ಯ ಅವರು ಟೀಕಿಸಿದರು.

ಕೋಲಾರದ ಘಟನೆಯನ್ನು ಎಸ್‍ಡಿಪಿಐ ಪಕ್ಷ ತೀವ್ರವಾಗಿ ಖಂಡಿಸುತ್ತದೆ ಎಂದು ತಿಳಿಸಿರುವ ಅವರು, ಈ ಸರ್ಕಾರ ತನ್ನ ಮನುವಾದಿ ಸಿದ್ಧಾಂತವನ್ನು ಪಕ್ಕಕ್ಕೆ ಇಟ್ಟು ತಾವು ಪ್ರಮಾಣ ಮಾಡಿರುವ ಸಂವಿಧಾನದ ಚೌಕಟ್ಟಿನಲ್ಲಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಬೇಕು. ಅದಕ್ಕಾಗಿ ಮುಖ್ಯಮಂತ್ರಿಗಳು ಮತ್ತು ಗೃಹಮಂತ್ರಿಗಳು ತಾವು ವ್ಯಸ್ತರಾಗಿರುವ ಕೋಮುದ್ವೇಷ ಮತ್ತು ಭ್ರಷ್ಟಾಚಾರದಿಂದ ಕೊಂಚ ಬಿಡುವು ತೆಗೆದುಕೊಂಡು ಕಾನೂನು ಸುವ್ಯವಸ್ಥೆಯ ಕಡೆ ಗಮನ ಹರಿಸಬೇಕು ಎಂದು ತಮ್ಮ ಪ್ರಕಟಣೆಯ ಮೂಲಕ ಸರ್ಕಾರವನ್ನು ಒತ್ತಾಯ ಮಾಡಿದ್ದಾರೆ.

Join Whatsapp
Exit mobile version