ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ ಮೇಲೆ ಹಲ್ಲೆ: ಕಠಿಣ ಕ್ರಮಕ್ಕೆ ಆಗ್ರಹಿಸಿದ ಎಸ್‌ಡಿಪಿಐ

Prasthutha|

ಬೆಂಗಳೂರು: ವಿಪರೀತ ಧ್ವನಿಯಲ್ಲಿ ದೇವಸ್ಥಾನದ ಧ್ವನಿವರ್ಧಕದ ಮೂಲಕ ಪ್ರತಿ ದಿನ ಸಂಗೀತವನ್ನು ಹಾಕಿ ತಮ್ಮ ಓದು, ಬರಹ ಮತ್ತು ದೈನಂದಿನ ಕಾರ್ಯಗಳಿಗೆ ತೊಂದರೆ ಮಾಡುತ್ತಿದ್ದನ್ನು ಪ್ರಶ್ನಿಸಿದ ಹಿರಿಯ ಹೋರಾಟಗಾರ, ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ ಮೇಲೆ ಕೋಲಾರದಲ್ಲಿ ಕಿಡಿಗೇಡಿಗಳು ಹಲ್ಲೆ ನಡೆಸಿದ್ದಾರೆ. ಇದು ಅತ್ಯಂತ ಖಂಡನೀಯ. ಹಲ್ಲೆ ನಡೆಸಿದ ಪುಡಿ ರೌಡಿಗಳ ವಿರುದ್ಧ ಕೊಲೆಯತ್ನ ಮತ್ತು ಎಸ್ಸಿ ಎಸ್ಟಿ ಅಟ್ರಾಸಿಟಿ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಿ ಕೂಡಲೇ ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಪ್ರಕಟಣೆಯ ಮೂಲಕ ಒತ್ತಾಯಿಸಿದ್ದಾರೆ.

- Advertisement -

ಧ್ವನಿವರ್ಧಕಗಳ ಶಬ್ದದ ಮಿತಿ ಎಷ್ಟಿರಬೇಕು, ಯಾವ ಸಮಯದಲ್ಲಿ ಧ್ವನಿವರ್ಧಕ ಬಳಸಬಹುದು ಎಂಬ ಬಗ್ಗೆ ನ್ಯಾಯಾಲಯ ಸ್ಪಷ್ಟ ನಿರ್ದೇಶನಗಳನ್ನು ನೀಡಿದೆ. ಆದರೆ ಕೋಮುವಾದಿ ಪಕ್ಷಗಳು ಮತ್ತು ಅದರ ನಾಯಕರ ಬೆಂಬಲ ಇದೆ ಎಂಬ ದರ್ಪದಲ್ಲಿ ಕೆಲ ಕಿಡಿಗೇಡಿಗಳು ನ್ಯಾಯಾಲಯದ ಆದೇಶಗಳನ್ನು ಧಿಕ್ಕರಿಸುವ ಉದ್ಧಟತನಕ್ಕೆ ಇಳಿಯುತ್ತಾರೆ. ಇದನ್ನು ಗಮನಿಸಿ ಕ್ರಮ ಕೈಗೊಳ್ಳಬೇಕಾದ ಕರ್ನಾಟಕದ ಕಾಂಗ್ರೆಸ್ ಸರ್ಕಾರ ಕೋಮುವಾದಿ ಶಕ್ತಿಗಳಿಗೆ ಹೆದರಿ ನೋಡಿಯೂ ನೋಡದಂತೆ ನಡೆದುಕೊಳ್ಳುತ್ತಿದೆ. ಇದರ ಪರಿಣಾಮವಾಗಿ ಇಂದು ರಾಜ್ಯದ ಪ್ರಮುಖ ದಲಿತ ಹೋರಾಟಗಾರ ಮತ್ತು ಹಿರಿಯ ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ ಅವರ ಮೇಲೆ ಹಲ್ಲೆ ಮಾಡುವಷ್ಟು ಧೈರ್ಯ ಕೋಮುವಾದಿ ಪುಂಡರಿಗೆ ಬಂದಿದೆ ಎಂದು ಮಜೀದ್ ಕಿಡಿಗಾರಿದ್ದಾರೆ.

ನ್ಯಾಯಾಲಯ ನಿಗದಿಪಡಿಸಿರುವ ಶಬ್ದ ಮಿತಿಯಲ್ಲಿ ನಿಗದಿತ ಸಮಯಕ್ಕೆ ಒಂದೆರಡು ನಿಮಿಷ ಬರುವ ಮಸೀದಿಯ ಅಝಾನ್ ಮತ್ತು ಚರ್ಚುಗಳ ಪ್ರಾರ್ಥನೆಯ ವಿರುದ್ಧ ಗಲಭೆಗೆ ಮುಂದಾಗುವ ಕಿಡಿಗೇಡಿಗಳು ಧರ್ಮದ ಹೆಸರಿನಲ್ಲಿ ಇತರರಿಗೆ ತೊಂದರೆ ಮಾಡುವ ಚಟುವಟಿಕೆಗಳ ವಿರುದ್ಧ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳದ ಹೊರತು, ಇಂತಹ ಪ್ರಕರಣಗಳು ನಡೆಯುತ್ತಲೇ ಇರುತ್ತವೆ ಎಂದು ಮಜೀದ್ ಅಭಿಪ್ರಾಯಪಟ್ಟಿದ್ದಾರೆ.

Join Whatsapp
Exit mobile version