Home ಟಾಪ್ ಸುದ್ದಿಗಳು ಬಾಂಗ್ಲಾದೇಶದಲ್ಲಿ ಹಿಂದೂ ದೇವಾಲಯಗಳ ಮೇಲಿನ ದಾಳಿ ಖಂಡನೀಯ: ಎಸ್ ಡಿಪಿಐ

ಬಾಂಗ್ಲಾದೇಶದಲ್ಲಿ ಹಿಂದೂ ದೇವಾಲಯಗಳ ಮೇಲಿನ ದಾಳಿ ಖಂಡನೀಯ: ಎಸ್ ಡಿಪಿಐ

ನವದೆಹಲಿ : ದುರ್ಗಾ ಪೂಜೆಯ ಸಂದರ್ಭದಲ್ಲಿ ಬಾಂಗ್ಲಾದೇಶದಲ್ಲಿ ಹಿಂದೂ ಸಮುದಾಯ ಮತ್ತು ಹಿಂದೂ ದೇವಾಲಯಗಳ ಮೇಲೆ ನಡೆದ ಹಿಂಸಾತ್ಮಕ ದಾಳಿಯನ್ನು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ- ಎಸ್ ಡಿಪಿಐ ರಾಷ್ಟ್ರೀಯ ಅಧ್ಯಕ್ಷ ಎಂ.ಕೆ.ಫೈಝಿ ತೀವ್ರವಾಗಿ ಖಂಡಿಸಿದ್ದಾರೆ.


ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಮುಸ್ಲಿಮರ ಹೆಸರಿನಲ್ಲಿ ಸಮಾಜಘಾತುಕ ಶಕ್ತಿಗಳು ಈ ದಾಳಿಗಳನ್ನು ನಡೆಸಿವೆ ಎಂದು ಆರೋಪಿಸಲಾಗಿದೆ. ಯಾವುದೇ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಲ್ಪಸಂಖ್ಯಾತರು ಎಲ್ಲಾ ನಾಗರಿಕ ಹಕ್ಕುಗಳನ್ನು ಬಹುಸಂಖ್ಯಾತರೊಂದಿಗೆ ಸಮಾನವಾಗಿ ಅನುಭವಿಸುವ ಹಕ್ಕನ್ನು ಹೊಂದಿದ್ದಾರೆ. ಅಲ್ಪಸಂಖ್ಯಾತರ ವಿರುದ್ಧದ ಯಾವುದೇ ರೀತಿಯ ಹಿಂಸೆ ಅಥವಾ ದುಷ್ಕೃತ್ಯವನ್ನು ಸರ್ಕಾರ ಸಮರ್ಥವಾಗಿ ನಿಭಾಯಿಸಬೇಕು ಮತ್ತು ಇಂತಹ ಕೃತ್ಯಗಳು ಮರುಕಳಿಸುವುದನ್ನು ತಡೆಯಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಬಾಂಗ್ಲಾದ ಕುಮಿಲಾ ಜಿಲ್ಲೆಯಲ್ಲಿ ಹಿಂದೂ ದೇವಾಲಯದ ಪ್ರತಿಮೆಯ ಕಾಲಡಿ ಪವಿತ್ರ ಕುರ್ ಆನ್ ಅನ್ನು ಇಟ್ಟಿರುವ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ಬಳಿಕ ಕಳೆದ ಬುಧವಾರದಿಂದ ಹಿಂದೂ ದೇವಾಲಯಗಳ ಮೇಲಿನ ದಾಳಿಗಳು ತೀವ್ರಗೊಂಡಿವೆ ಎಂದು ವರದಿಯಾಗಿದೆ.

ಈ ಧರ್ಮನಿಂದನೆಯ ಕೃತ್ಯ ಮತ್ತು ನಂತರದ ಹಿಂಸಾಚಾರವು ಎರಡೂ ಧಾರ್ಮಿಕ ಸಮುದಾಯಗಳ ನಡುವೆ ಬಿರುಕನ್ನು ಸೃಷ್ಟಿಸಲು ಉದ್ದೇಶಪೂರ್ವಕವಾಗಿ ಯೋಜಿಸಿದಂತಿದೆ. ಬಾಂಗ್ಲಾದೇಶದ ನೆರೆಯ ಭಾರತದಲ್ಲಿ ಮುಸ್ಲಿಮರು ಚಿತ್ರಹಿಂಸೆಗೊಳಗಾಗುತ್ತಿದ್ದಾರೆ ಮತ್ತು ಹತ್ಯೆಗೀಡಾಗುತ್ತಿದ್ದಾರೆ. ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಹಿಂದೂಗಳ ಮೇಲಿನ ಈ ಹಿಂಸೆಯು ಮುಸ್ಲಿಮರ ಮೇಲಿನ ದೌರ್ಜನ್ಯವನ್ನು ಮುಚ್ಚಿಹಾಕಲು ಭಾರತವನ್ನು ಆಳುತ್ತಿರುವ ಹಿಂದುತ್ವ ಗುಂಪಿಗೆ ಸಹಾಯ ಮಾಡುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.


ಧರ್ಮ, ಜಾತಿ, ಪಂಥ ಅಥವಾ ಇನ್ನಾವುದೇ ಹೆಸರಿನಲ್ಲಿ ಅಲ್ಪಸಂಖ್ಯಾತರ ಮೇಲಿನ ದಾಳಿ ಅತ್ಯಂತ ಖಂಡನೀಯ, ಮತ್ತು ದೇಶದ ಅಲ್ಪಸಂಖ್ಯಾತರ ಹಕ್ಕುಗಳು, ಜೀವಗಳು ಮತ್ತು ಆಸ್ತಿಗಳನ್ನು ರಕ್ಷಿಸುವುದು ಸರ್ಕಾರದ ಕರ್ತವ್ಯವಾಗಿದೆ ಎಂದು ಫೈಝಿ ಹೇಳಿದ್ದಾರೆ.

ಅವರು ಆಲ್ಬರ್ಟ್ ಕ್ಯಾಮಸ್ ಅವರ “ಪ್ರಜಾಪ್ರಭುತ್ವವು ಬಹುಸಂಖ್ಯಾತರ ಕಾನೂನಲ್ಲ, ಆದರೆ ಅಲ್ಪಸಂಖ್ಯಾತರ ರಕ್ಷಣೆ” ಎಂದು ಮಾತನ್ನು ಉಲ್ಲೇಖಿಸಿದ್ದಾರೆ. ಬಾಂಗ್ಲಾದೇಶ ಸರ್ಕಾರವು ಈ ದಾಳಿ ಮರುಕಳಿಸದಂತೆ ಪರಿಣಾಮಕಾರಿಯಾಗಿ ಕ್ರಮಕೈಗೊಳ್ಳಬೇಕು ಮತ್ತು ದೇಶದಲ್ಲಿ ಹಿಂದೂ ಸಮುದಾಯಕ್ಕೆ ರಕ್ಷಣೆ ನೀಡಿ ಕೋಮು ಸಾಮರಸ್ಯವನ್ನು ಕಾಪಾಡಬೇಕು ಎಂದು ಎಂ.ಕೆ.ಫೈಝಿ ಒತ್ತಾಯಿಸಿದ್ದಾರೆ.

Join Whatsapp
Exit mobile version