ದುಬೈ: ದುಬೈನ ಬೇಕರಿಯೊಂದರಲ್ಲಿ ಪಾಕಿಸ್ತಾನಿ ಪ್ರಜೆಯೊಬ್ಬ ದಾಳಿ ನಡೆಸಿದ್ದು, ದಾಳಿಯಲ್ಲಿ ತೆಲಂಗಾಣದ ಇಬ್ಬರು ಸಾವನ್ನಪ್ಪಿ, ಒಬ್ಬ ವ್ಯಕ್ತಿ ಗಾಯಗೊಂಡಿರುವುದಾಗಿ ಮೃತರ ಕುಟುಂಬಸ್ಥರು ಮಂಗಳವಾರ ತಿಳಿಸಿದ್ದಾರೆ.
ಸಾವನ್ನಪ್ಪಿದವರನ್ನು ನಿರ್ಮಲ್ ಜಿಲ್ಲೆಯ ಸೋನ್ ಗ್ರಾಮದ ಅಷ್ಟಪು ಪ್ರೇಮ್ಸಾಗರ್ (35), ಹಾಗೂ ನಿಜಾಮಾಬಾದ್ನ ಶ್ರೀನಿವಾಸ್ ಎಂದು ಗುರುತಿಸಲಾಗಿದೆ. ಗಾಯಗೊಂಡಿರುವ ಸಾಗರ್ ಎನ್ನುವವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಸಾವನ್ನಪ್ಪಿದವರು ಕೆಲಸ ಮಾಡುತ್ತಿದ್ದ ಬೇಕರಿಯಲ್ಲಿ ಈ ಘಟನೆ ನಡೆದಿದೆ.
ಏನಿದು ಘಟನೆ?: “ಪ್ರೇಮಸಾಗರ್ ಕಳೆದ ಐದಾರು ವರ್ಷಗಳಿಂದ ಆ ಬೇಕರಿಯಲ್ಲಿ ಉದ್ಯೋಗಿಯಾಗಿದ್ದರು. ಎರಡು ವರ್ಷಗಳ ಹಿಂದೆ ಕೊನೆಯದಾಗಿ ಊರಿಗೆ ಬಂದು ಹೋಗಿದ್ದ. ಏಪ್ರಿಲ್ 11ರಂದು ಆತನನ್ನು ಕತ್ತಿಯಿಂದ ಇರಿದು ಕೊಲೆ ಮಾಡಲಾಗಿದೆ. ಪ್ರೇಮಸಾಗರ್ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ದುರಂತದ ಬಗ್ಗೆ ಅವರ ಕುಟುಂಬ ಸದಸ್ಯರಿಗೆ ಇನ್ನೂ ಮಾಹಿತಿ ನೀಡಿಲ್ಲ ಎಂದು ಅವರ ಚಿಕ್ಕಪ್ಪ ಎ ಪೋಶೆಟ್ಟಿ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಜೊತೆಗೆ ಆತನ ಪಾರ್ಥೀವ ಶರೀರವನ್ನು ಭಾರತಕ್ಕೆ ತರಲು ಸರ್ಕಾರ ಸಹಾಯ ಮಾಡಬೇಕು. ಹಾಗೂ ಪ್ರೇಮಸಾಗರ್ ಅವರ ಆರ್ಥಿಕ ಸ್ಥಿತಿಗತಿಯನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಅವರಿಗೆ ನೆರವು ನೀಡಬೇಕು” ಎಂದು ಮನವಿ ಮಾಡಿದರು.
ಈ ಮಧ್ಯೆ ಕೇಂದ್ರ ಸಚಿವ ಕಿಶನ್ ರೆಡ್ಡಿ ಮಾಧ್ಯಮಗಳಿಗೆ ಮಾಹಿತಿ ನೀಡಿ, ಸಾವನ್ನಪ್ಪಿದ ಎರಡನೇ ವ್ಯಕ್ತಿಯ ಹೆಸರನ್ನು ಹೇಳಿದ್ದಾರೆ. ಗಾಯಗೊಂಡಿರುವ ವ್ಯಕ್ತಿಯ ಬಗ್ಗೆ ಅವರ ಪತ್ನಿ ಭವಾನಿ ನಿಜಮಾಬಾದ್ನಲ್ಲಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಹತ್ಯೆಗಳ ಬಗ್ಗೆ ದುಃಖ ವ್ಯಕ್ತಪಡಿಸಿದ ರೆಡ್ಡಿ, “ಸಾವನ್ನಪ್ಪಿದವ ಪಾರ್ಥೀವ ಶರೀರಗಳನ್ನು ಭಾರತಕ್ಕೆ ತರಲು ಸಹಾಯಕ್ಕಾಗಿ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರೊಂದಿಗೆ ಮಾತನಾಡಿದ್ದೇನೆ” ಎಂದು ತಿಳಿಸಿದರು.