ಮುಂಬೈ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಬಿಸಿಲಿನ ತಾಪಕ್ಕೆ 11 ಮಂದಿ ಮೃತಪಟ್ಟಿದ್ದಾರೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಹೇಳಿದ್ದಾರೆ.
ನವಿ ಮುಂಬೈನಲ್ಲಿ ನಡೆದ ‘ಮಹಾರಾಷ್ಟ್ರ ಭೂಷಣ’ ಪ್ರಶಸ್ತಿ ಸಮಾರಂಭದಲ್ಲಿ 120ಕ್ಕೂ ಹೆಚ್ಚು ಜನ ಬಿಸಿಲಿನ ತಾಪದಿಂದ ಡಿಹೈಡ್ರೇಶನ್ ಹಾಗೂ ಶಾಖ-ಸಂಬಂಧಿತ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು. ಇವರಲ್ಲಿ 50 ಮಂದಿಯನ್ನು ವಿವಿಧ ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.
ಸಾಮಾಜಿಕ ಕಾರ್ಯಕರ್ತ ಅಪ್ಪಾಸಾಹೇಬ್ ಧರ್ಮಾಧಿಕಾರಿಗೆ ಮಹಾರಾಷ್ಟ್ರ ಸರ್ಕಾರ ಸ್ಥಾಪಿಸಿದ ಪ್ರಶಸ್ತಿಯನ್ನು ಗೃಹ ಸಚಿವ ಅಮಿತ್ ಶಾ ಪ್ರದಾನ ಮಾಡಿದರು. ಈ ಕಾರ್ಯಕ್ರಮವು ನವೀ ಮುಂಬೈನಲ್ಲಿ ನಡೆದಿದ್ದು, ಅಲ್ಲಿ ದಿನದ ತಾಪಮಾನವು ಗರಿಷ್ಠ 38 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು.
ಈ ಘಟನೆಯನ್ನು “ದುರದೃಷ್ಟಕರ” ಎಂದು ಕರೆದ ಶಿಂಧೆ, ಮೃತರ ಕುಟುಂಬಗಳಿಗೆ 5 ಲಕ್ಷ ರೂ.ಗಳ ಪರಿಹಾರವನ್ನು ಘೋಷಿಸಿದ್ದಾರೆ.