►► ಮಳಲಿ ತಾಂಬೂಲ ಪ್ರಶ್ನೆ ಹಿನ್ನೆಲೆ ಒಡ್ಡಲಾಗಿದ್ದ ಚಾಲೆಂಜ್
ಮಂಗಳೂರು: ಮಳಲಿ ಮಸೀದಿ ಕುರಿತಾಗಿ ವಿವಾದವೆಬ್ಬಿಸಿ ಸಂಘ ಪರಿವಾರದ ಸಂಘಟನೆಗಳು ತಾಂಬೂಲ ಪ್ರಶ್ನೆ ನಡೆಸಿದ್ದ ಬೆನ್ನಲ್ಲೇ ಮಂಗಳೂರಿನ ಖ್ಯಾತ ವಿಚಾರವಾದಿ, ಅಖಿಲ ಭಾರತ ವಿಚಾರವಾದಿ ಸಂಘದ ಅಧ್ಯಕ್ಷರೂ ಆದ ಪ್ರೊ. ನರೇಂದ್ರ ನಾಯಕ್ ಅವರು ಒಡ್ಡಿದ್ದ ಸವಾಲನ್ನು ಬೇಧಿಸಲು ಜ್ಯೋತಿಷಿಗಳಿಗೆ ವಿಫಲರಾಗಿದ್ದಾರೆ. ಎಲ್ಲ ಧರ್ಮದಲ್ಲಿರುವ ಜ್ಯೋತಿಷಿಗಳಿಗೆ ಪಂಥಾಹ್ವಾನವನ್ನು ನೀಡಲಾಗಿತ್ತು. ಆದರೆ, ನಾಲ್ವರು ಮಾತ್ರ ಈ ಸವಾಲನ್ನು ಸ್ವೀಕರಿಸಲು ಮುಂದಾಗಿದ್ದರಾದರೂ, ಯಾವುದೇ ಸಫಲತೆ ಕಂಡಿಲ್ಲ.
ಮೇ. 26ರ ಬೆಳಗ್ಗೆ 11.33ಕ್ಕೆ ನರೇಂದ್ರ ನಾಯಕ್ ಅವರು ಏಳು ಲಕೋಟೆಗಳನ್ನು ಸೀಲ್ ಮಾಡಿದ್ದರು. ಮೊದಲ ಲಕೋಟೆಯಲ್ಲಿ ಏನನ್ನೂ ಹಾಕಿರಲಿಲ್ಲ. ಎರಡನೇ ಲಕೋಟೆಯಲ್ಲಿ ಪೇಪರ್ನೊಳಗೆ ಒಂದು ಡಾಲರ್ ಇರಿಸಲಾಗಿತ್ತು. ಮೂರನೇ ಲಕೋಟೆಯಲ್ಲಿ ಅರಬ್ ದೇಶದ 10 ದಿರಾಮ್ ನೋಟು, ನಾಲ್ಕನೇ ಲಕೋಟೆಯಲ್ಲಿ ನೇಪಾಲದ 20 ರೂ. ಕರೆನ್ಸಿ ನೋಟು, 5ನೇ ಲಕೋಟೆಯಲ್ಲಿ ಸಿಂಗಾಪುರದ 10 ಡಾಲರ್ ಬಿಲ್, 6ನೇ ಕವರ್ನಲ್ಲಿ ” ASTROLOGY HAS FLOPPED MISERABLY ONCE AGAIN” ಎಂದು ಬರೆದ ಪತ್ರ, 7ನೇ ಲಕೋಟೆಯಲ್ಲಿ ಭಾರತದ 10 ರೂ. ಕರೆನ್ಸಿ ಇರಿಸಲಾಗಿತ್ತು.. ಹೀಗೆ 7 ಲಕೋಟೆಗಳಲ್ಲಿ 6ನ್ನು ಉತ್ತರಿಸಿ, ಅದರಲ್ಲಿ 5 ಸರಿ ಉತ್ತರವಿದ್ದರೂ 50 ಮಂದಿಗೆ ತಲಾ ಒಂದು ಲಕ್ಷ ರೂ. ಬಹುಮಾನವನ್ನು ನೀಡುವುದಾಗಿ ಸವಾಲೊಡ್ಡಿದ್ದರು. ಇದಕ್ಕೆ ಸರಿಯುತ್ತರವನ್ನು ಮೇ. 31ರ ರಾತ್ರಿ 12 ಗಂಟೆಯವರೆಗೆ ಕಳುಹಿಸಲು ಅವಕಾಶವಿತ್ತು.
ಮೊದಲೇ ತಿಳಿಸಿದಂತೆ ಲಕೋಟೆಯನ್ನು ಇಂದು ಮಂಗಳೂರು ಪ್ರೆಸ್ ಕ್ಲಬ್‌ನಲ್ಲಿ ತೆರೆಯಲಾಗಿದೆ. ಸವಾಲಿಗೆ ನಾಲ್ಕು ಮಂದಿ ಜ್ಯೋತಿಷಿಗಳು ಉತ್ತರಿಸಿದ್ದಾರೆ. ಒಬ್ಬರು ಒಂದು ಲಕೋಟೆ ಖಾಲಿ, ಮತ್ತೊಬ್ಬರು ಆರು ಲಕೋಟೆ ಖಾಲಿ, ಮತ್ತೊಂದರಲ್ಲಿ ಕರೆನ್ಸಿ, ಭಸ್ಮ, ಹೂ, ದೈವದೇವರ ಫೋಟೋ ಇದೆ ಎಂದು ಉತ್ತರಿಸಿದ್ದರು. ಇನ್ನೊಂದು ಉತ್ತರದಲ್ಲಿ ಮಳಲಿ ಮಸೀದಿ ಅಡಿ ದೇವಸ್ಥಾನ ಇದೆ ಎಂದು ಬರೆಯಲಾಗಿದ್ದು, ಇದು ಸವಾಲಿನ ಪ್ರಶ್ನೆಯಾಗಿದ್ದರಿಂದ ಅದನ್ನು ಪರಿಗಣನೆಗೆ ತೆಗೆದುಕೊಳ್ಳಲಾಗಿಲ್ಲ ಎಂದು ವಿಚಾರವಾದಿ ನರೇಂದ್ರ ನಾಯಕ್ ತಿಳಿಸಿದ್ದಾರೆ.