ಮಂಗಳೂರು: ತಾನು ವಾಸವಿರುವ ಅಪಾರ್ಟ್ ಮೆಂಟ್ ನ ಐದನೇ ಮಹಡಿಯ ಫೈಬರ್ ಶೀಟ್ ಮೇಲೆ ನಡೆದಾಡಿದ ವೇಳೆ ತುಂಡಾಗಿ ಕೆಳಕ್ಕೆ ಬಿದ್ದ ಪರಿಣಾಮ ಸಹಾಯಕ ಪ್ರಾಧ್ಯಾಪಕರೊಬ್ಬರು ಗಂಭೀರ ಗಾಯಗೊಂಡಿರುವ ಘಟನೆ ನಗರದ ಸುರತ್ಕಲ್ ಠಾಣಾ ವ್ಯಾಪ್ತಿಯ ಮುಕ್ಕ ಬಳಿ ಗುರುವಾರ ಸಂಜೆ ನಡೆದಿದೆ.
ಜೀವನ್ಮರಣ ಸ್ಥಿತಿಯಲ್ಲಿರುವ ವ್ಯಕ್ತಿ ಮನೀಶ್ ಕುಮಾರ್ (36) ಮೂಲತಃ ಉತ್ತರ ಪ್ರದೇಶದವರಾಗಿದ್ದು, ಪ್ರಸ್ತುತ NITK ಸಂಸ್ಥೆಯಲ್ಲಿ ಸಹಾಯಕ ಪ್ರಾಧ್ಯಾಪಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಮುಕ್ಕ ಬಳಿಯ ಅಗ್ರಜ ಅಪಾರ್ಟ್ ಮೆಂಟ್ ನ ಎರಡನೇ ಮಹಡಿಯಲ್ಲಿ ವಾಸವಿರುವ ಮನೀಶ್ ಕುಮಾರ್ ತನ್ನ ಮನೆಯ ಟಿವಿಗೆ ಡಿಶ್ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ಸಿಬ್ಬಂದಿಯೋರ್ವ ಬಂದಿದ್ದು, ಐದನೇ ಮಹಡಿಯಲ್ಲಿ ಡಿಶ್ ಸಂಪರ್ಕದ ಕೆಲಸವನ್ನು ನಿರ್ವಹಿಸುತ್ತಿದ್ದರು ಎನ್ನಲಾಗಿದೆ.
ಈ ಸಂದರ್ಭ ಇದನ್ನು ವೀಕ್ಷಿಸಲೆಂದು ಮನೀಶ್ ಕುಮಾರ್ ಕೂಡಾ ತೆರಳಿದ್ದು ಮೇಲ್ಭಾಗದಲ್ಲಿ ಹಾಸಿರುವ ತೆಳುವಾದ ಫೈಬರ್ ಶೀಟ್ ಮೇಲೆ ನಡೆದಿದ್ದಾಗಿ ತಿಳಿದು ಬಂದಿದೆ. ಆದರೆ ಸ್ವಲ್ಪ ಹೊತ್ತಿನಲ್ಲೇ ಫೈಬರ್ ಶೀಟ್ ಮಧ್ಯ ಭಾಗದಲ್ಲಿಯೇ ತುಂಡಾಗಿದ್ದು ಸಹಾಯಕ ಪ್ರಾಧ್ಯಾಪಕ ಮನೀಶ್ ನೆಲ ಅಂತಸ್ತಿಗೆ ಉರುಳಿ ಬಿದ್ದಿದ್ದಾಗಿ ಪೊಲೀಸರು ತಿಳಿಸಿದ್ದಾರೆ. ತಕ್ಷಣವೇ ಮನೀಶ್ ಕುಮಾರ್ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಹೊಟ್ಟೆ, ಕಾಲು ಹಾಗೂ ಕೈಗಳಿಗೆ ಗಂಭೀರ ಗಾಯಗೊಂಡ ಹಿನ್ನೆಲೆ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, ಐಸಿಯು ನಲ್ಲಿ ಚಿಕಿತ್ಸೆ ಮುಂದುವರೆಸಲಾಗಿದೆ. ಆದರೆ, ಮನೀಶ್ ಕುಮಾರ್ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿರುವುದಾಗಿ ಆಸ್ಪತ್ರೆ ಮೂಲಗಳು ತಿಳಿಸಿವೆ.