ಬೆಂಗಳೂರು: ರಾಜ್ಯದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಕಾರ್ಯತಂತ್ರ ರೂಪಿಸುವ ಉದ್ದೇಶದಿಂದ ಬೆಂಗಳೂರಿನಲ್ಲಿ ಇಂದಿನಿಂದ ಮೂರು ದಿನಗಳ ಕಾಲ “ರಾಷ್ಟ್ರೀಯ ಯುವ ಕಾಂಗ್ರೆಸ್ ಕಾರ್ಯಕಾರಣಿ” ಆರಂಭಗೊಂಡಿದೆ.
ವಿಧಾನಸಭಾ ಚುನಾವಣೆಯಲ್ಲಿ ಯುವ ಕಾಂಗ್ರೆಸ್ ಪಾತ್ರ, ಚುನಾವಣಾ ಪ್ರಚಾರ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವೈಫಲ್ಯಗಳನ್ನು ಜನರ ಮುಂದಿಟ್ಟು ಪರಿಣಾಮಕಾರಿಯಾಗಿ ಹೋರಾಟ ನಡೆಸುವ ಮತ್ತು ನಿರುದ್ಯೋಗ, ಇತರೆ ಯುವ ಜನಾಂಗ ಎದುರಿಸುತ್ತಿರುವ ಗಂಭೀರ ಸಮಸ್ಯೆಗಳನ್ನು ಮತದಾರರ ಬಳಿಗೆ ಕೊಂಡೊಯ್ಯುವ ಕುರಿತು ಚರ್ಚಿಸಲಾಯಿತು.
ಪ್ರಮುಖವಾಗಿ ಚುನಾವಣೆ ಹಿನ್ನೆಲೆಯಲ್ಲಿ “ಯೂತ್ ಜೋಡೋ – ಭೂತ್ ಜೋಡೋ” ಅಭಿಯಾನದ ಯಶಸ್ಸಿಗೆ ಕೈಗೊಳ್ಳಬೇಕಿರುವ ಕಾರ್ಯತಂತ್ರ, ಪಕ್ಷ ಸಂಘಟನೆಯನ್ನು ಬಲವರ್ಧನೆಗೊಳಿಸುವ ಬಗ್ಗೆಯೂ ಮೊದಲ ದಿನದ ಕಾರ್ಯಕಾರಣಿಯಲ್ಲಿ ಗಹನವಾಗಿ ಸಮಾಲೋಚನೆ ನಡೆಸಲಾಗಿದೆ.
ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್ ಬಿ.ವಿ. ನೇತೃತ್ವದಲ್ಲಿ ಧ್ವಜಾರೋಹಣದ ಮೂಲಕ ಕಾರ್ಯಕಾರಣಿ ಆರಂಭಿಸಲಾಯಿತು. ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್, ರಾಷ್ಟ್ರೀಯ ಯುವ ಕಾಂಗ್ರೆಸ್ ಉಸ್ತುವಾರಿ ಕೃಷ್ಣ ಅಳವಾರು, ಯುವ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಎಂ.ಎಸ್. ರಕ್ಷಾ ರಾಮಯ್ಯ, ಕೆಪಿಸಿಸಿ ಉಪಾಧ್ಯಕ್ಷ ಸೂರಜ್ ಹೆಗ್ಡೆ ಮತ್ತಿತರರು ಕಾರ್ಯಕಾರಣಿಯಲ್ಲಿ ಭಾಗವಹಿಸಿದ್ದರು.