ವಿಧಾನಸಭಾ ಚುನಾವಣೆ| ಭಾರತ ಚುನಾವಣಾ ಆಯೋಗದಿಂದ ಪೂರ್ವತಯಾರಿ ಪರಿಶೀಲನೆ

Prasthutha|

ಬೆಂಗಳೂರು: ಮುಂಬರುವ ಸಾರ್ವತ್ರಿಕ ಚುನಾವಣೆ ಕರ್ನಾಟಕ ವಿಧಾನಸಭೆ – 2023ಗೆ ಸಂಬಂಧಿಸಿದಂತೆ ಇದುವರೆಗೆ ಕೈಗೊಳ್ಳಲಾಗಿರುವ ಪೂರ್ವ ತಯಾರಿಗಳು ಹಾಗೂ ಅಗತ್ಯ ಸಿದ್ಧತೆಗಳ ಪರಿಶೀಲನೆಯನ್ನು ಭಾರತ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತರಾದ ರಾಜೀವ್ ಕುಮಾರ್ ನೇತೃತ್ವದ ಹಿರಿಯ ಅಧಿಕಾರಿಗಳ ತಂಡ ಗುರುವಾರ ಪರಿಶೀಲನೆ ನಡೆಸಿತು.

- Advertisement -

ಭಾರತ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತರಾದ ರಾಜೀವ್ ಕುಮಾರ್, ಚುನಾವಣಾ ಆಯುಕ್ತರುಗಳಾದ ಅನೂಪ್ ಚಂದ್ರಪಾಂಡೆ, ಅರುಣ್ ಗೋಯಲ್ ಹಾಗೂ ಉಪ ಆಯುಕ್ತರುಗಳು ಸೇರಿದಂತೆ ಆಯೋಗದ ಹಿರಿಯ ಅಧಿಕಾರಿಗಳು ಪರಿವೀಕ್ಷಣೆ ನಡೆಸಿದರು.

ಭಾರತ ಚುನಾವಣಾ ಆಯೋಗದ ಮುಖ್ಯ ಆಯುಕ್ತರ ನೇತೃತ್ವದ ತಂಡವು‌ ಮೊದಲಿಗೆ ವಿಕಾಸಸೌಧದಲ್ಲಿ ಮುಂಬರುವ ಚುನಾವಣೆ ಕುರಿತು ಪ್ರತ್ಯೇಕವಾಗಿ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದರು ಹಾಗೂ ಮುಖ್ಯವಾಗಿ ಅವರ ಸಲಹೆ ಮತ್ತು ಅಭಿಪ್ರಾಯಗಳನ್ನು ಇದೇ ಸಂದರ್ಭದಲ್ಲಿ ಪಡೆದುಕೊಂಡರು.

- Advertisement -

ನಂತರ ಕರ್ನಾಟಕ ಮುಖ್ಯ ಚುನಾವಣಾಧಿಕಾರಿಗಳಾದ ಮನೋಜ್ ಕುಮಾರ ಮೀನಾ,ಅಪರ ಮುಖ್ಯ ಚುನಾವಣಾಧಿಕಾರಿಗಳಾದ ಎಂ.ವೆಂಕಟೇಶ್ ಕುಮಾರ್,ರಾಜೇಂದ್ರ ಚೋಳನ್ ಸೇರಿದಂತೆ ಹಿರಿಯ ಅಧಿಕಾರಿಗಳೊಂದಿಗೆ ಮತ್ತು ಪೊಲೀಸ್ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ರಾಜ್ಯಮಟ್ಟದಲ್ಲಿ ಚುನಾವಣಾ ಪೂರ್ವ ತಯಾರಿ ಕುರಿತು  ಅಗತ್ಯ ಮಾಹಿತಿ ಪಡೆದುಕೊಂಡರು ಹಾಗೂ ಇದೇ ಸಂದರ್ಭದಲ್ಲಿ ಅನೇಕ ಸಲಹೆ-ಸೂಚನೆಗಳನ್ನು ಚುನಾವಣಾ ಆಯೋಗದ ಮುಖ್ಯ ಆಯುಕ್ತರಾದ ರಾಜೀವ್ ಕುಮಾರ್ ಅವರು ನೀಡಿದರು.

ನಂತರ ಸಂಜೆ ಹೋಟೆಲ್ ತಾಜ್ ವೆಸ್ಟೆಂಡ್ ನಲ್ಲಿ “ಪ್ರಜಾಪ್ರಭುತ್ವದ ಒಳಗೊಳ್ಳುವಿಕೆ ಮತ್ತು ಸಮಗ್ರತೆ” ವಿಷಯದ ಕುರಿತ ಅಂತರರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣ ನಡೆಯಿತು.

ವಿವಿಧ ಪ್ರಜಾಪ್ರಭುತ್ವ ದೇಶಗಳ ಚುನಾವಣಾ ಆಯುಕ್ತರುಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ಪಾಲ್ಗೊಂಡಿದ್ದರು.

ಭಾರತ ಚುನಾವಣಾ ಆಯೋಗದ‌ ಮುಖ್ಯ ಆಯುಕ್ತರ ತಂಡವು ನಾಳೆ(ಶುಕ್ರವಾರ) ಜಿಲ್ಲಾ ಚುನಾವಣಾಧಿಕಾರಿಗಳೊಂದಿಗೆ ಚುನಾವಣೆಯ ಪೂರ್ವಭಾವಿ ತಯಾರಿ ಕುರಿತು ಸಭೆ ನಡೆಸಲಿದೆ. ನಂತರ ಸಂಜೆ ನಗರದ ಐಐಎಸ್‍ಸಿ ಆವರಣದಲ್ಲಿರುವ ಟಾಟಾ ಸಭಾಂಗಣದಲ್ಲಿ ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವತಿಯಿಂದ ಹಮ್ಮಿಕೊಳ್ಳಲಾಗಿರುವ ಮತದಾರರ ಜಾಗೃತಿ ಕುರಿತ ವಿಶೇಷ ವಸ್ತುಪ್ರದರ್ಶನ, ಹೇಕಥಾನ್ ಉದ್ಘಾಟಿಸಿದ ನಂತರ ಮತದಾರರ ಜಾಗೃತಿ ಮೂಡಿಸುವ ಎಲ್‍ಇಡಿ ವಾಹನಗಳಿಗೆ ಚಾಲನೆ ನೀಡಲಿದ್ದಾರೆ. ತದನಂತರ ವಿಶೇಷ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಸಂವಾದದಲ್ಲಿ ಚುನಾವಣಾ ರಾಯಭಾರಿಗಳು, ವಿದ್ಯಾರ್ಥಿಗಳು, ದಿವ್ಯಾಂಗರು, ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದಾರೆ.

Join Whatsapp
Exit mobile version