ನವದೆಹಲಿ: ಪಂಚರಾಜ್ಯದಲ್ಲಿ ಚುನಾವಣಾ ಪ್ರಕ್ರಿಯೆ ಮುಕ್ತಾಯಗೊಂಡ ಬೆನ್ನಲ್ಲೇ, ದೇಶದೆಲ್ಲೆಡೆ ಪೆಟ್ರೋಲ್, ಡೀಸೆಲ್ ಬೆಲೆ ಲೀಟರ್’ಗೆ ಸುಮಾರು 15 ರೂ. ರಷ್ಟು ಹೆಚ್ಚಳವಾಗುವ ಕುರಿತು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಉತ್ತರ ಪ್ರದೇಶ ಒಳಗೊಂಡಂತೆ ಪಂಚ ರಾಜ್ಯದ ಚುನಾವಣೆಗೆ ಮೊದಲು ತೈಲ ಕಂಪೆನಿಗಳು ಇಂಧನ ಬೆಲೆಯಲ್ಲಿ ಸ್ಥಿರತೆಯನ್ನು ಕಾಯ್ದುಕೊಂಡು ಬಂದಿದ್ದರಿಂದ ನಷ್ಟಕ್ಕೆ ಗುರಿಯಾಗಿದ್ದವು ಎಂದು ಹೇಳಲಾಗಿದೆ.
ಈ ಮಧ್ಯೆ ರಷ್ಯಾ – ಉಕ್ರೇನ್ ಸಂಘರ್ಷದಿಂದಾಗಿ ಜಾಗತಿಕವಾಗಿ ಕಚ್ಚಾ ತೈಲ ದುಬಾರಿ ಆಗಿದ್ದು, ಆಮದು ಮತ್ತು ರಫ್ತಿನ ಮೇಲೆ ಕೆಟ್ಟ ಪರಿಣಾಮ ಉಂಟಾಗಿರುವುದರಿಂದ ಇಂಧನ ಬೆಲೆಯೇರಿಕೆ ಅನಿವಾರ್ಯ ಎಂಬ ಅಭಿಪ್ರಾಯವನ್ನು ತಜ್ಞರು ವ್ಯಕ್ತಪಡಿಸಿದ್ದಾರೆ.
ಪ್ರಸಕ್ತ ಅಮೆರಿಕನ್ ಡಾಲರ್ ಮುಂದೆ ರೂಪಾಯಿ ಮೌಲ್ಯವು ತೀವ್ರ ಕುಸಿತ ಕಂಡಿದ್ದು, ಪ್ರತಿ ಡಾಲರ್’ಗೆ 76.43ಕ್ಕೆ ತಲುಪಿದೆ. ಬ್ರೆಂಟ್ ತೈಲ ದರ ಶೇಕಡಾ 4.91ರಷ್ಟು ಹೆಚ್ಚಳವಾಗಿ ಪ್ರತಿ ಬ್ಯಾರಲ್‌ಗೆ 116.6 ಡಾಲರ್ ಆಗಿದೆ ಎಂದು ಅಂದಾಜಿಸಲಾಗಿದೆ.
ಈ ನಷ್ಟವನ್ನು ಸಮದೂಗಿಸುವ ನಿಟ್ಟಿನಲ್ಲಿ ಪೆಟ್ರೋಲ್, ಡೀಸೆಲ್ ದರ ಪ್ರತಿ ಲೀಟರ್‌ಗೆ ರೂ. 10 ರಿಂದ 15 ಹೆಚ್ಚಿಸುವ ಅನಿವಾರ್ಯತೆಯಿದೆ ಎಂದು ತಜ್ಞರು ತಿಳಿಸಿದ್ದಾರೆಂದು ಮೂಲಗಳಿಂದ ವರದಿಯಾಗಿವೆ.
ಸದ್ಯ ಪಂಚರಾಜ್ಯ ಚುನಾವಣೆಗಳ ಪೈಕಿ ನಾಲ್ಕು ಕಡೆ ಬಿಜೆಪಿ ಮತ್ತು ಒಂದು ಕಡೆ ಆಮ್ ಆದ್ಮಿ ಪಾರ್ಟಿ ಜಯಗಳಿಸಿದ್ದು, ಇದರ ಇಂಧನ ಬೆಲೆಯೇರಿಕೆ ಜನರಿಗೆ ನುಂಗಲಾರದ ಬಿಸಿತುಪ್ಪವಾಗಿ ಪರಿಣಮಿಸಿದೆ.