ಕೇಂದ್ರ ಚುನಾವಣಾ ಆಯೋಗವು ಮಹಾರಾಷ್ಟ್ರ, ಜಾರ್ಖಂಡ್ ವಿಧಾನಸಭಾ ಚುನಾವಣಾ ದಿನಾಂಕವನ್ನು ಪ್ರಕಟಿಸಿದೆ.
ಮಹಾರಾಷ್ಟ್ರದಲ್ಲಿ ನವೆಂಬರ್ 20 ರಂದು ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ.
ಜಾರ್ಖಂಡ್ ನಲ್ಲಿ ನವೆಂಬರ್ 13 ಹಾಗೂ ನವೆಂಬರ್ 20ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ನವೆಂಬರ್ 23 ರಂದು ಫಲಿತಾಂಶ ಪ್ರಕಟಗೊಳ್ಳಲಿದೆ.
288 ಸ್ಥಾನಗಳ ಮಹಾರಾಷ್ಟ್ರ ವಿಧಾನಸಭೆಯ ಅವಧಿ ನವೆಂಬರ್ 26 ರಂದು ಕೊನೆಗೊಳ್ಳಲಿದ್ದು, 81 ಸ್ಥಾನಗಳನ್ನು ಹೊಂದಿರುವ ಜಾರ್ಖಂಡ್ ವಿಧಾನಸಭೆಯ ಅವಧಿಯು ಜನವರಿ 5, 2025 ರಂದು ಕೊನೆಗೊಳ್ಳಲಿದೆ.
ಮಹಾರಾಷ್ಟ್ರದಲ್ಲಿ ಮತ್ತು ಜಾರ್ಖಂಡ್ ನಲ್ಲಿ ಎನ್ ಡಿಎ ಮತ್ತು ಇಂಡಿಯಾ ಮೈತ್ರಿಕೂಟದ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ. ಮಹಾರಾಷ್ಟ್ರದ ಎನ್ ಡಿಎ ಕೂಟದಲ್ಲಿ ಬಿಜೆಪಿ ಜೊತೆ ಶಿವಸೇನೆ ಶಿಂಧೆ ಬಣ ಹಾಗೂ ಎನ್ ಸಿಪಿ ಅಜಿತ್ ಪವರ್ ಬಣದ ಮೈತ್ರಿ ಇದೆ. ಇಂಡಿಯಾ ಒಕ್ಕೂಟದಲ್ಲಿ ಕಾಂಗ್ರೆಸ್ ಶಿವಸೇನೆ ಉದ್ಧವ್ ಬಣ ಹಾಗೂ ಎನ್ ಸಿಪಿ ಶರದ್ ಪವರ್ ಬಣದ ಮೈತ್ರಿ ಇದೆ.
ಜಾರ್ಖಂಡ್ ನಲ್ಲಿ ಜೆಎಂಎಂ ನೇತೃತ್ವದ ಇಂಡಿಯಾ ಮೈತ್ರಿ ಕೂಟದಲ್ಲಿ ಕಾಂಗ್ರೆಸ್ ಸ್ಫರ್ಧಿಸಲಿದೆ. ಬಿಜೆಪಿ ನೇತೃತ್ವದ ಎನ್ ಡಿಎ ಕೂಟದಲ್ಲಿ ಎಜೆಎಸ್ ಯು, ಜೆಡಿಯು, ಎಲ್ ಜೆಪಿ ಮೈತ್ರಿ ಮಾಡಿಕೊಂಡಿದೆ.