► ಬೆಳ್ತಂಗಡಿ ಮತ್ತು ಮೂಡಬಿದಿರೆ ಕಾಂಗ್ರೆಸ್ ಟಿಕೆಟ್ ಬಿಲ್ಲವರಿಗೆ ಫಿಕ್ಸ್?
ಮಂಗಳೂರು: ಬಿಲ್ಲವ ಸಮುದಾಯದವರು ಬಹುಸಂಖ್ಯಾತರಾಗಿರುವ ದಕ್ಷಿಣ ಕನ್ನಡ ಜಿಲ್ಲೆಯ 2 ಕ್ಷೇತ್ರಗಳಲ್ಲಿ ಬಿಲ್ಲವ ಅಭ್ಯರ್ಥಿಗಳಿಗೆ ಟಿಕೆಟ್ ನೀಡುವುದಾಗಿ ಹೈಕಮಾಂಡ್ ನಾಯಕರು ರಾಜ್ಯ ನಾಯಕರಿಗೆ ತಿಳಿಸಿರುವ ಮಾಹಿತಿ ಕಾಂಗ್ರೆಸ್ ಮೂಲಗಳಿಂದ ತಿಳಿದುಬಂದಿದೆ.
ದಕ್ಷಿಣ ಕನ್ನಡ ಜಿಲ್ಲೆಯ 8 ಕ್ಷೇತ್ರಗಳ ಪೈಕಿ ಕನಿಷ್ಠ 2 ಕ್ಷೇತ್ರಗಳಲ್ಲಿ ಬಿಲ್ಲವ ಸಮುದಾಯದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲೇಬೇಕು ಎಂದು ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ಮತ್ತು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಅವರು ರಾಜ್ಯ ಕಾಂಗ್ರೆಸ್ ನಾಯಕರಿಗೆ ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಹೈಕಮಾಂಡ್ ತೀರ್ಮಾನದ ಹಿನ್ನೆಲೆಯಲ್ಲಿ ಬೆಳ್ತಂಗಡಿಯಲ್ಲಿ ರಕ್ಷಿತ್ ಶಿವರಾಂ ಮತ್ತು ಮೂಡಬಿದಿರೆ ಕ್ಷೇತ್ರದಲ್ಲಿ ಪ್ರತಿಭಾ ಕುಳಾಯಿ ಅಥವಾ ರಾಜಶೇಖರ್ ಕೋಟ್ಯಾನ್ ಅವರಿಗೆ ಕಾಂಗ್ರೆಸ್ ಟಿಕೆಟ್ ಸಿಗುವುದು ಬಹುತೇಕ ಖಚಿತವಾಗಿದೆ. ಬಿಲ್ಲವರ ಪ್ರಾಬಲ್ಯವಿರುವ ಬೆಳ್ತಂಗಡಿಯಲ್ಲಿ ಮಾಜಿ ಶಾಸಕ ವಸಂತ ಬಂಗೇರ ಅವರು ಸ್ಪರ್ಧೆಯಿಂದ ಹಿಂದೆ ಸರಿಯಲು ಒಪ್ಪಿದ್ದು, ರಕ್ಷಿತ್ ಶಿವರಾಂ ಅವರು ಕಾಂಗ್ರೆಸ್ ಅಭ್ಯರ್ಥಿಯಾಗುವುದು ಖಚಿತವಾಗಿದ್ದು, ಘೋಷಣೆಯಷ್ಟೇ ಬಾಕಿಯಿದೆ.
ಮೂಡಬಿದಿರೆ ಕ್ಷೇತ್ರದಲ್ಲೂ ಬಿಲ್ಲವರ ಪ್ರಾಬಲ್ಯವಿದ್ದು, ಕಳೆದ ಸಲ ಬಿಲ್ಲದ ಸಮುದಾಯದ ಬಿಜೆಪಿ ಅಭ್ಯರ್ಥಿ ದೊಡ್ಡ ಅಂತರದಿಂದ ಗೆಲುವು ಕಂಡಿದ್ದರು. ಹೀಗಾಗಿ ಮೂಡಬಿದಿರೆಯಲ್ಲಿ ಬಿಜೆಪಿಯನ್ನು ಸೋಲಿಸಲು ಕಾಂಗ್ರೆಸ್ ಕೂಡ ಬಿಲ್ಲವ ಅಭ್ಯರ್ಥಿಯನ್ನೇ ಕಣಕ್ಕಿಳಿಸಲು ತೀರ್ಮಾನ ಮಾಡಿದ್ದು, ಸಾಮಾಜಿಕ ಹೋರಾಟಗಾರ್ತಿ ಪ್ರತಿಭಾ ಕುಳಾಯಿ ಅಥವಾ ಬಿಲ್ಲವ ಮಹಾಮಂಡಳಿ ಅಧ್ಯಕ್ಷರಾದ ರಾಜಶೇಖರ್ ಕೋಟ್ಯಾನ್ ಅವರನ್ನು ಕಣಕ್ಕಿಳಿಸಲು ಚಿಂತನೆ ನಡೆಸಿದೆ ಎಂದು ತಿಳಿದುಬಂದಿದೆ. ಮೂಡಬಿದಿರೆ ಕ್ಷೇತ್ರದಲ್ಲಿ ಯುವನಾಯಕ ಮಿಥುನ್ ರೈ ಅವರು ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಮಿಥುನ್ ರೈ ಅವರು ಕಳೆದ ಲೋಕಸಭಾ ಅಭ್ಯರ್ಥಿಯಾಗಿದ್ದಾಗ ಮೂಡಬಿದಿರೆ ಕ್ಷೇತ್ರದಲ್ಲಿ 40 ಸಾವಿರ ಮತಗಳಿಂದ ಹಿನ್ನಡೆ ಅನುಭವಿಸಿದ್ದರು. ಅಲ್ಲದೇ ಸ್ಥಳೀಯರಲ್ಲದ ಜನರಿಗೆ ಟಿಕೆಟ್ ಕೊಡಬೇಡಿ ಎಂದು ಸ್ಥಳೀಯ ನಾಯಕರು ಮತ್ತು ಕಾರ್ಯಕರ್ತರು ವಿರೋಧ ಮಾಡುತ್ತಿರುವುದರಿಂದ ಮಿಥುನ್ ರೈ ಅವರಿಗೆ ಟಿಕೆಟ್ ನೀಡದಿರಲು ಕಾಂಗ್ರೆಸ್ ಹೈಕಮಾಂಡ್ ತೀರ್ಮಾನಿಸಿದೆ ಎಂಬ ಮಾಹಿತಿ ಕಾಂಗ್ರೆಸ್ ಮೂಲಗಳು “ಪ್ರಸ್ತುತ” ನ್ಯೂಸ್’ಗೆ ತಿಳಿಸಿವೆ.